ನವದೆಹಲಿ: ಜಗತ್ತಿನಲ್ಲಿ ಉಂಟಾದ ಕೊರೊನಾ ದಾಳಿಯಲ್ಲಿ ಡೆಲ್ಟಾ ವೈರಸ್ ಹಾನಿ ಹೆಚ್ಚು ಅಪಾಯಕಾರಿಯಾಗಿತ್ತು. ಅದರಲ್ಲೂ ನಿಯಮಾವಳಿ ಸಡಿಲಿಕೆಯ ಬಳಿಕ ಡೆಲ್ಟಾ ಹಾನಿ ಮಾರಣಾಂತಿಕವಾಗಿ ಅತ್ಯಂತ ವೇಗವಾಗಿ, ಅಪಾಯಕಾರಿಯಾಗಿ ಹರಡಿತ್ತು ಎಂದು ವೈರಲಾಜಿಸ್ಟ್ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೊರೊನಾ ಲಸಿಕೆ ಪಡೆದವರಲ್ಲಿಯೂ ಡೆಲ್ಟಾ ವೈರಸ್ ಹಾನಿ ಮಾಡುವ ಸಾಮರ್ಥ್ಯ ಹೊಂದಿದ್ದು, ಲಸಿಕಡೆ ಪಡೆಯದಿರುವ ಸಮುದಾಯದಲ್ಲಿ ಹರಡುವಿಕೆ ಮತ್ತು ಅಪಾಯಕಾರಿ ಪ್ರಮಾಣ ಹೆಚ್ಚಾಗಿದೆ ಎಂದು ತಜ್ಞರು ಕಂಡು ಕೊಂಡಿದ್ದಾರೆ.
ವೇಗವಾಗಿ ಹರಡುತ್ತೆ ಡೆಲ್ಟಾ!:
ಡೆಲ್ಟಾ ವೈರಸ್ ಅನಾರೋಗ್ಯಕ್ಕೆ ಒಳಮಾಡಿ ಆಸ್ಪತ್ರೆಗೆ ದಾಖಲಾಗುವಂತೆ ಮಾಡುವುದರ ಜೊತೆಗೆ ಒಬ್ಬರಿಂದ ಮತ್ತೊಬ್ಬರಿಗೆ ಅತ್ಯಂತ ವೇಗವಾಗಿ ಹರಡುತ್ತದೆ. ಇದು ಸೋಂಕಿತರ ಪ್ರಮಾಣ ಹಾಗೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗುವಂತೆ ಮಾಡಿದೆ. ಅಂಕಿ - ಅಂಶಗಳ ಪ್ರಕಾರ ಸಂಪೂರ್ಣ ಲಸಿಕೆ ಪಡೆದವರಿಗಿಂತಲೂ ಲಸಿಕೆ ಹಾಕಿಸಿಕೊಳ್ಳದೇ ಇರುವ ಜನರಲ್ಲಿ ಈ ವೈರಸ್ ಹೆಚ್ಚಿನ ಹಾನಿ ಮಾಡಿದೆ ಎಂದು ತಿಳಿದು ಬಂದಿದೆ.
ಇಂಗ್ಲೆಂಡ್ನ ಸಾರ್ವಜನಿಕ ಆರೋಗ್ಯ ಇಲಾಖೆಯ ಪ್ರಕಾರ ಡೆಲ್ಟಾ ರೂಪಾಂತರಿ ಕೊರೊನಾಗೆ ತುತ್ತಾಗಿರುವ ಶೇ.58.3ರಷ್ಟು ಮಂದಿ ಲಸಿಕೆ ಪಡೆಯದೇ ಇರುವವರು ಹಾಗೂ ಶೇ.22.8ರಷ್ಟು ಮಂದಿ 2ನೇ ಡೋಸ್ ಸಹ ಪಡೆದವರಾಗಿದ್ದಾರೆ ಎಂದು ತಿಳಿದು ಬಂದಿದೆ. ಸಿಂಗಾಪೂರ್ನಲ್ಲಿ ಲಸಿಕೆ ಪಡೆದ ಶೇ.75ರಷ್ಟು ಮಂದಿಯಲ್ಲೇ ಈ ರೂಪಾಂತರಿ ಪತ್ತೆಯಾಗಿದೆ. ಇಸ್ರೆಲ್ನಲ್ಲಿ ಈ ಪ್ರಮಾಣ ಶೇ.60ರಷ್ಟಿದ್ದರೆ, ಅಮೆರಿಕದಲ್ಲಿ ಈ ಸಂಖ್ಯೆ ಹೆಚ್ಚಾಗಿದ್ದು, ಶೇ.97ರಷ್ಟಿದೆ ಎಂಬ ಕಳವಳಕಾರಿ ಮಾಹಿತಿ ಹೊರಬಿದ್ದಿದೆ. ಆದರೆ, ಈ ಪ್ರಮಾಣ ಫೈಜರ್ ಲಸಿಕೆ ಪಡೆದವರಲ್ಲಿ ಕಡಿಮೆ ಕಂಡು ಬಂದಿದೆ.
ಆದರೆ, ಚೀನಾದಲ್ಲಿ ನಡೆಸಿದ ಅಧ್ಯಯನವು ಡೆಲ್ಟಾ ರೂಪಾಂತರ ಸೋಂಕಿತ ಜನರು ಹಿಂದಿನ ವುಹಾನ್ ರೂಪಾಂತರಿಗಿಂತಲೂ 1000 ಪಟ್ಟು ಹೆಚ್ಚು ಪ್ರಸರಣ ಸಾಮರ್ಥ್ಯ ಹೊಂದಿದೆ ಎಂದು ಹೇಳಿದೆ.