ನವದೆಹಲಿ: ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ಪ್ರದೇಶದಲ್ಲಿ ಚಳಿ ಪ್ರಮಾಣ ತೀವ್ರವಾಗಿದೆ. ಈ ಶೀತಗಾಳಿ ವಾರಾಂತ್ಯದವರೆಗೂ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದೆ. ಜನವರಿ 19ರ ನಂತರ ಎರಡು 'ವೆಸ್ಟರ್ನ್ ಡಿಸ್ಟರ್ಬೆನ್ಸಸ್' ಪ್ರಭಾವದಿಂದ ಈ ಶೀತ ಗಾಳಿ ಕಡಿಮೆ ಆಗಬಹುದು ಎಂದು ಐಎಂಡಿ ತಿಳಿಸಿದೆ.
ಇನ್ನು ಭಾರಿ ಚಳಿಯಿಂದ ಉಂಟಾದ ದಟ್ಟ ಮಂಜಿನ ವಾತಾವರಣದ ಹಿನ್ನೆಲೆಯಲ್ಲಿ ಗೋಚರತೆ ಪ್ರಮಾಣ ಕ್ಷೀಣಿಸಿದೆ. ದೆಹಲಿಯಲ್ಲಿ ಅನೇಕ ವಿಮಾನಗಳು ವಿಳಂಬವಾಗಿ ಹಾರಾಟ ನಡೆಸಿದ್ದು, ಉತ್ತರ ರೈಲ್ವೆ ಪ್ರದೇಶದಲ್ಲಿ ಆರು ರೈಲುಗಳು ಕೂಡ ತಡವಾಗಿ ಸಂಚಾರ ಆರಂಭಿಸಿವೆ. ಮಂಗಳವಾರ ಮುಂಜಾನೆ ಮಂಜು ಮುಸುಕಿದ ವಾತಾವರಣದಿಂದ ರೈಲು ಸಂಚಾರಗಳು ಒಂದರಿಂದ ಎಂಟು ತಾಸು ತಡವಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ದಾಖಲೆ ಚಳಿ: ದೆಹಲಿಯ ಕೆಲವು ಪ್ರದೇಶದಲ್ಲಿ 4.6 ಡಿಗ್ರಿ ಸೆಲ್ಸಿಯಸ್ ಕಡಿಮೆ ಉಷ್ಣಾಂಶ ದಾಖಲಾಗಿದೆ. 2021ರ ಬಳಿಕ ದೆಹಲಿಯ ಅನೇಕ ಪ್ರದೇಶದಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ. 2021ರ ಜನವರಿ 1ರಂದು ಸಫ್ಧರ್ಜಂಗ್ನಲ್ಲಿ 1.4 ಡಿಗ್ರಿ ಇದ್ದರೆ, ಲೋಧಿ ರಸ್ತೆಯಲ್ಲಿ 1.6 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡುಬಂದಿದೆ. ಈ ವರ್ಷ ಜನವರಿ 5 ರಿಂದ 9ನೇ ತಾರೀಖಿನವರೆಗೆ ಭಾರಿ ಚಳಿಗೆ ರಾಷ್ಟ್ರ ರಾಜಧಾನಿ ತತ್ತರಿಸಿದೆ. ದಶಕದಲ್ಲಿ ಎರಡನೇ ದೀರ್ಘ ಶೀತಗಾಳಿಗೆ ದೆಹಲಿ ಸಾಕ್ಷಿಯಾಗಿದೆ. ಈ ತಿಂಗಳಲ್ಲಿ ದೆಹಲಿ 50 ಗಂಟೆಗಳ ದಟ್ಟ ಮಂಜು ವಾತಾವರಣ ಹೊಂದಿರುವ ದಾಖಲೆಯೂ ಇದೆ. 2019ರಲ್ಲಿ ಕೂಡ ರಾಷ್ಟ್ರ ರಾಜಧಾನಿ ಅತಿ ಹೆಚ್ಚು ದಟ್ಟ ಮಂಜಿನ ವಾತಾವರಣದಿಂದ ತತ್ತರಿಸಿತ್ತು.
ರಾಷ್ಟ್ರ ರಾಜಧಾನಿಯಲ್ಲಿ ಶೀತಗಾಳಿ ಪ್ರಮಾಣ ಹೆಚ್ಚಿದ್ದು, ಮೈನಸ್ ಡಿಗ್ರಿವರೆಗೂ ಹೋಗಲಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ, ಹವಾಮಾನ ಇಲಾಖೆ ಅಧಿಕಾರಿಗಳು ಇದನ್ನು ತಳ್ಳಿ ಹಾಕಿದ್ದು, ದೆಹಲಿಯಲ್ಲಿ ಹಿಮಪಾತವಾಗುವ ಯಾವುದೇ ಲಕ್ಷಣವಿಲ್ಲ. ಚಳಿ ತೀವ್ರವಾದ ಮಾತ್ರಕ್ಕೆ ಇಲ್ಲಿ ಹಿಮಪಾತವಾಗುವುದಿಲ್ಲ. ಹಿಮಪಾತಕ್ಕೆ ಪೂರಕವಾದ ಯಾವುದೇ ವಾತಾವರಣ ಇಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಹಿಮಪಾತ: ಮುಂದಿನ ನಾಲ್ಕು ದಿನ ಹಿಮಾಚಲ ಪ್ರದೇಶದ ಅನೇಕ ಪ್ರದೇಶಗಳು ಭಾರಿ ಚಳಿಗೆ ತತ್ತರಿಸಲಿವೆ. ಪಾಶ್ಚಿಮಾತ್ಯ ಅಡಚಣೆಯಿಂದ ಇಲ್ಲಿನ ಗಿರಿಶಿಖರ ತಾಣದಲ್ಲಿ ಮುಂದಿನ ವಾರ ಭಾರಿ ಹಿಮಪಾತದ ಜೊತೆಗೆ ಮಳೆಯಾಗಲಿದೆ. ಇದರಿಂದ ತಾಪಮಾನದಲ್ಲಿ ಇಳಿಕೆ ಕಾಣಲಿದೆ ಎಂದು ಐಎಂಡಿ ಅಂದಾಜಿಸಿದೆ.
ರಾಜಸ್ಥಾನದ ಫತೇಪುರ್ನಲ್ಲೂ ಚಳಿ ಮುಂದುವರೆದಿದೆ. ರಾತ್ರಿ ಇಲ್ಲಿ ಮೈನಸ್ 4.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಚುರು ಪ್ರದೇಶದಲ್ಲಿ ಮೈನಸ್ 2.5 ಡಿಗ್ರಿ ಸೆಲ್ಸಿಯಸ್ ಇದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಶೇಖಾವಾತ್ ಪ್ರದೇಶ ಹೊರತುಪಡಿಸಿ ಉಳಿದೆಡೆ ಒಂದರಿಂದ ಎರಡು ಡಿಗ್ರಿ ಸೆಲ್ಸಿಯಸ್ವರೆಗೆ ತಾಪಮಾನದಲ್ಲಿ ಏರಿಕೆ ಕಂಡಿದೆ. ಗುರುವಾರದಿಂದ ಈ ಶೀತಗಾಳಿ ತಗ್ಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇದನ್ನೂ ಓದಿ: ಯೂಟ್ಯೂಬ್ ಆರಂಭಿಸಿ ಲಕ್ಷ ಲಕ್ಷ ಸಂಪಾದನೆ:50ಲಕ್ಷದ ಆಡಿ ಕಾರು ಖರೀದಿಸಿ ಯುವಕರಿಗೆ ಸ್ಪೂರ್ತಿ