ನವದೆಹಲಿ: ಕೊರೊನಾ ಯುಗವು ಜನರ ಜೀವನಶೈಲಿಯ ಜೊತೆಗೆ ಅವರ ವೃತ್ತಿಯನ್ನು ಸಹ ಬದಲಾಯಿಸಿದೆ. ಮಕ್ಕಳ ಭವಿಷ್ಯವನ್ನು ಸುಧಾರಿಸುವ ಶಿಕ್ಷಕರ ಕಾರ್ಯ ವಿಧಾನವೂ ಇದೀಗ ಬದಲಾಗಿದೆ.
ಹಕ್ಕಿ ಜ್ವರವನ್ನು ಗಮನದಲ್ಲಿಟ್ಟುಕೊಂಡಿರುವ ದೆಹಲಿ ಸರ್ಕಾರ ಬಹುತೇಕ ಖಾಲಿ ಕುಳಿತಿರುವ ಶಿಕ್ಷಕರಿಗೆ ಹೊಸ ಕರ್ತವ್ಯವನ್ನು ನೀಡಿದೆ. ದೆಹಲಿಯಲ್ಲಿ ಪಕ್ಷಿ ಜ್ವರದಿಂದ ಹೆಚ್ಚುತ್ತಿರುವ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ಕಂದಾಯ ಇಲಾಖೆಯಿಂದ ಆದೇಶ ಹೊರಡಿಸಲಾಗಿದ್ದು, ದೆಹಲಿಯಲ್ಲಿ ಕೋಳಿಗಳ ಚಲನವಲನವನ್ನು ಮೇಲ್ವಿಚಾರಣೆ ಮಾಡಲು ಐದು ಶಿಕ್ಷಕರ ತಂಡಗಳನ್ನು ರಚಿಸಲಾಗಿದೆ.
ಪ್ರತಿ ತಂಡದಲ್ಲಿ ಮೂವರು ಶಿಕ್ಷಕರಿಗೆ ಕರ್ತವ್ಯ ನೀಡಲಾಗಿದೆ. ದೆಹಲಿ ಕಡೆಗೆ ಬರುವ ಪ್ರತಿ ಕೋಳಿ ಸಾಗಾಣಿಕೆ ವಾಹನದ ಮೇಲೆ ನಿಗಾ ಇಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ.
ದೆಹಲಿ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಪಶುವೈದ್ಯರು ನೀಡುವ ಆರೋಗ್ಯ ಪ್ರಮಾಣಪತ್ರವಿಲ್ಲದೆ ದೆಹಲಿಯಲ್ಲಿ ಕೋಳಿ ಅಥವಾ ಕೋಳಿ ಹೊತ್ತೊಯ್ಯುವ ವಾಹನ ಪ್ರವೇಶ ಮಾಡುವಂತಿಲ್ಲ ಎಂಬ ಸ್ಪಷ್ಟ ಉಲ್ಲೇಖವಿದೆ. ಪಕ್ಷಿಗಳಲ್ಲಿ ಯಾವುದೇ ವೈರಸ್ ಇಲ್ಲ ಎಂದು ಆರೋಗ್ಯ ಪ್ರಮಾಣಪತ್ರದಲ್ಲಿ ನಮೂದಿಸಬೇಕು. ಆಗಷ್ಟೇ ವಾಹನಗಳನ್ನು ದೆಹಲಿಯ ಒಳಗೆ ಸೇರಿಸಿಕೊಳ್ಳಲಾಗುವುದು. ಈ ಎಲ್ಲ ವಿಷಯಗಳನ್ನು ಶಿಕ್ಷಕರು ನೋಡಿಕೊಳ್ಳಬೇಕಾಗಿದೆ.