ನವದೆಹಲಿ: ಇಸ್ರೇಲ್ ರಾಯಭಾರ ಕಚೇರಿ ಬಳಿ ಸಂಭವಿಸಿದ ಸ್ಫೋಟ ಸಂಬಂಧ ಇಲ್ಲಿನ ತುಘಲಕ್ ರೋಡ್ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಸ್ಫೋಟದ ಕುರಿತಂತೆ ದೆಹಲಿ ಪೊಲೀಸರಿಗೆ ವರದಿ ಹಸ್ತಾಂತರಿಸಲಾಗುವುದು ಎಂದು ಎನ್‌ಎಸ್‌ಜಿ ಬಾಂಬ್ ಸ್ಕ್ವಾಡ್ ತಂಡದ ಉನ್ನತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸದ್ಯ ದೆಹಲಿ ಪೊಲೀಸರು ವಿಧಿವಿಜ್ಞಾನ ವರದಿಗಳಿಗಾಗಿ ಕಾಯುತ್ತಿದ್ದಾರೆ. ಈಗಾಗಲೇ ರಾಷ್ಟ್ರೀಯ ಭದ್ರತಾ ದಳ ಮತ್ತು ದೆಹಲಿ ಪೊಲೀಸರಿಂದ ವಿಧಿವಿಜ್ಞಾನ ತಜ್ಞರು ಸ್ಥಳದಲ್ಲಿ ಎಲೆಗಳು ಮತ್ತು ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಪ್ರಕರಣ ಸಂಬಂಧ ದೆಹಲಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದು, ಘಟನೆಗೂ ಮುನ್ನ ಸ್ಥಳದಲ್ಲಿ ಓಡಾಡಿದ ಜನರನ್ನೂ ಕೂಡ ವಿಚಾರಣೆಗೆ ಒಳಪಡಿಸಲಾಗಿದೆ. ಅಲ್ಲದೆ, ಪೃಥ್ವಿ ರಾಜ್ ರಸ್ತೆ ಮತ್ತು ಅಬ್ದುಲ್ ಕಲಾಂ ರಸ್ತೆಯಲ್ಲಿನ ಎಲ್ಲ ಟ್ಯಾಕ್ಸಿ ಮತ್ತು ಆಟೋ ಚಾಲಕರನ್ನು ಸಹ ಕೂಲಂಕಷವಾಗಿ ವಿಚಾರಣೆ ನಡೆಸಲಾಗಿದೆ.
ಡಿಸೆಂಬರ್ 26 ರಂದು ದೆಹಲಿಯ ಚಾಣಕ್ಯಪುರಿಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ ಸಂಭವಿಸಿತ್ತು. ಘಟನೆ ಬಳಿಕ ಇಸ್ರೇಲಿ ರಾಯಭಾರ ಕಚೇರಿ ಬಳಿ ಭದ್ರತೆಗಾಗಿ ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿತ್ತು. ಆದರೆ ಘಟನಾ ಸ್ಥಳದಲ್ಲಿ ಯಾವುದೇ ವಸ್ತುಗಳು ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು.
ಸ್ಫೋಟದ ಶಬ್ದ ಕೇಳಿಸಿದ ಬಗ್ಗೆ ಇಸ್ರೇಲ್ ರಾಯಭಾರ ಕಚೇರಿಯ ಬಳಿಯ ಭದ್ರತಾ ಅಧಿಕಾರಿಗಳು ಮಾಹಿತಿ ನೀಡಿದ್ದರು. ಸ್ಥಳಕ್ಕೆ ಎಫ್‌ಎಸ್‌ಎಲ್ ತಂಡದವರು ಭೇಟಿ ನೀಡಿ ಪರಿಶೀಲಿಸಿದ್ದರು. ಜೊತೆಗೆ ದೆಹಲಿ ವಿಶೇಷ ದಳ, ಶ್ವಾನದಳ ಮತ್ತು ಎನ್‌ಐಎ ಅಧಿಕಾರಿಗಳು ಕೂಡ ಸ್ಥಳಕ್ಕೆ ತೆರಳಿ ತನಿಖೆ ನಡೆಸಿದ್ದರು. ಈ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ದೆಹಲಿ ಪೊಲೀಸರು ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳನ್ನು ಪತ್ತೆ ಮಾಡಿದ್ದಾರೆ. ಆದರೆ, ಇಬ್ಬರೂ ಕೃತ್ಯದಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಅಧಿಕಾರಿಗಳು ದೃಢಪಡಿಸಿಲ್ಲ.
ಘಟನೆ ಕುರಿತಂತೆ ಭಾರತದಲ್ಲಿನ ಇಸ್ರೇಲ್‌ನ ಉಪ ರಾಯಭಾರಿ ಓಹದ್ ನಕಾಶ್ ಕಯ್ನಾರ್, ಇಸ್ರೇಲ್ ರಾಯಭಾರ ಕಚೇರಿಯಲ್ಲಿನ ಎಲ್ಲ ಸಿಬ್ಬಂದಿ ಮತ್ತು ರಾಜತಾಂತ್ರಿಕರು ಸುರಕ್ಷಿತವಾಗಿದ್ದಾರೆ ಎಂದು ಖಚಿತಪಡಿಸಿದ್ದರು.
ಇದನ್ನೂ ಓದಿ: ದೆಹಲಿ: ಇಸ್ರೇಲ್ ರಾಯಭಾರಿ ಕಚೇರಿ ಸಮೀಪ ಸ್ಫೋಟ, ಘಟನಾ ಸ್ಥಳದಲ್ಲಿ ಪತ್ರ ಪತ್ತೆ