ನವದೆಹಲಿ: ದೇಶದೆಲ್ಲೆಡೆ ನವರಾತ್ರಿ ಸಂಭ್ರಮವಿದೆ. ಇದೇ ವೇಳೆ ಉಗ್ರರ ದಾಳಿಯ ಸಾಧ್ಯತೆ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಸೂಚನೆ ನೀಡಿದೆ. ಹೀಗಾಗಿ, ನವದೆಹಲಿಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ದೆಹಲಿ ಪೊಲೀಸ್ ಕಮೀಷನರ್ ರಾಕೇಶ್ ಅಸ್ಥಾನಾ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಭಯೋತ್ಪಾದನಾ ಚಟುವಟಿಕೆಗಳ ನಿಗ್ರಹಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. ಇದೇ ವೇಳೆ ಸ್ಥಳೀಯರ ಬೆಂಬಲದಿಂದ ಯಾವ ರೀತಿಯಲ್ಲಿ ಭಯೋತ್ಪಾದನೆಯನ್ನು ನಿಗ್ರಹಿಸಬಹುದು ಎಂಬ ಬಗ್ಗೆಯೂ ಅಭಿಪ್ರಾಯ ಸಂಗ್ರಹಿಸಲಾಗಿದೆ.
ಸ್ಥಳೀಯರ ನೆರವಿಲ್ಲದೇ ಭಯೋತ್ಪಾದಕರು ಯಾವುದೇ ದಾಳಿಯನ್ನು ನಡೆಸಲು ಸಾಧ್ಯವಿಲ್ಲ. ಸ್ಥಳೀಯ ಅಪರಾಧಿಗಳು, ಗ್ಯಾಂಗ್ಸ್ಟರ್ಗಳು ಭಯೋತ್ಪಾದನಾ ದಾಳಿಗೆ ಸಹಕಾರ ನೀಡುತ್ತವೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಸೈಬರ್ ಕೆಫೆ, ಕೆಮಿಕಲ್ ಶಾಪ್ಗಳು, ಪಾರ್ಕಿಂಗ್ ಸ್ಥಳಗಳು, ಸ್ಕ್ರ್ಯಾಪ್ ಮತ್ತು ಕಾರ್ ಡೀಲರ್‌ಗಳನ್ನು ಯಾವಾಗಲೂ ಪರಿಶೀಲನೆ ನಡೆಸುತ್ತಿರಬೇಕು. ಭಯೋತ್ಪಾದಕರು ಪೆಟ್ರೋಲ್ ಬಂಕ್ ಅಥವಾ ಪೆಟ್ರೋಲಿಯಂ ಟ್ಯಾಂಕರ್‌ಗಳು ಗುರಿಯಾಗಿಸಿ ದಾಳಿ ನಡೆಸುವ ಬಗ್ಗೆ ಗುಪ್ತಚರ ಮಾಹಿತಿ ಇದೆ ಎಂದು ರಾಕೇಶ್ ಅಸ್ಥಾನಾ ತಿಳಿಸಿದರು.
ಸ್ಥಳೀಯ ಸಂಘಟನೆಗಳು ಹಾಗೂ ಅಮನ್ ಕಮಿಟಿಗಳ ಜೊತೆಗೆ ಕೂಡಾ ರಾಕೇಶ್ ಅಸ್ಥಾನಾ ಸಭೆ ನಡೆಸಿದ್ದಾರೆ. ಇದರ ಜೊತೆಗೆ ದೆಹಲಿಗೆ ಆಗಮಿಸುವ ಕಾರ್ಮಿಕರು ಹಾಗೂ ಇಲ್ಲಿ ಬಾಡಿಗೆಗೆ ನೆಲೆಸಿರುವವರ ಪರಿಶೀಲನೆ ನಡೆಸಲು ಅಭಿಯಾನ ನಡೆಸಬೇಕೆಂದು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಗೋಡೆ ಕುಸಿತ: ಮೂವರು ಮಕ್ಕಳು ಸಹಿತ ಐವರು ಸಾವು, ಇಬ್ಬರು ಗಾಯ