ನವದೆಹಲಿ: ಸಂಸತ್ತಿನ ಭದ್ರತಾ ಲೋಪ ಪ್ರಕರಣದ ಆರೋಪಿ ನೀಲಂಗೆ ಎಫ್‌ಐಆರ್ ಪ್ರತಿಯನ್ನು ನೀಡುವಂತೆ ಪಟಿಯಾಲ ಕೋರ್ಟ್ ನೀಡಿದ ಆದೇಶವನ್ನು ದೆಹಲಿ ಪೊಲೀಸರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ನೇತೃತ್ವದ ಪೀಠದ ಮುಂದೆ ದೆಹಲಿ ಪೊಲೀಸರು ಈ ಬಗ್ಗೆ ಪ್ರಸ್ತಾಪಿಸಿದ್ದು, ಈ ಕುರಿತು ಹೈಕೋರ್ಟ್ ಇಂದು ಮಧ್ಯಾಹ್ನ ವಿಚಾರಣೆಗೆ ಆದೇಶಿಸಿದೆ.
ಡಿಸೆಂಬರ್ 21 ರಂದು ಪಟಿಯಾಲ ಹೌಸ್ ಕೋರ್ಟ್, ಈ ಪ್ರಕರಣದ ಆರೋಪಿ ನೀಲಂ ಅವರ ಕುಟುಂಬ ಸದಸ್ಯರಿಗೆ 24 ಗಂಟೆಗಳ ಒಳಗೆ ಎಫ್‌ಐಆರ್ ಪ್ರತಿಯನ್ನು ನೀಡುವಂತೆ ದೆಹಲಿ ಪೊಲೀಸರ ವಿಶೇಷ ಸೆಲ್‌ಗೆ ಸೂಚಿಸಿತ್ತು. ಪಟಿಯಾಲ ಹೌಸ್ ಕೋರ್ಟ್ನ ಈ ಆದೇಶವನ್ನು ದೆಹಲಿ ಪೊಲೀಸರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಪಟಿಯಾಲಾ ಹೌಸ್ ಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ಆರೋಪಿ ನೀಲಂ ಪರ ವಕೀಲರು, ನ್ಯಾಯವಾದಿ ಮತ್ತು ಕುಟುಂಬದವರಿಗೆ ಭೇಟಿಯಾಗಲು ಅವಕಾಶ ನೀಡುವುದು ನಮ್ಮ ಕಾನೂನುಬದ್ಧ ಹಕ್ಕು. ಅಲ್ಲದೇ ಅವರ ವಿರುದ್ಧ ಯಾವ ಆರೋಪಗಳನ್ನು ದಾಖಲಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಕುಟುಂಬಕ್ಕೆ ಇದೆ. ಇದಕ್ಕಾಗಿ ಎಫ್‌ಐಆರ್‌ನ ಪ್ರತಿ ಕುಟುಂಬಕ್ಕೆ ನೀಡಬೇಕು ಎಂದು ನಿಲಂ ಪರ ವಕೀಲ ವಾದ ಮಂಡಿಸಿದ್ದರು.
ಇದನ್ನು ಆಲಿಸಿದ ನ್ಯಾಯಾಲಯ ತನ್ನ ಆದೇಶದಲ್ಲಿ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿರುವವರೆಗೆ ಕಾನೂನು ನೆರವು ಪಡೆಯಬಹುದಾಗಿದೆ. ಅಲ್ಲದೇ ಆರೋಪಿ ನೀಲಂ ತನ್ನ ಕುಟುಂಬ ಸದಸ್ಯರು ಮತ್ತು ವಕೀಲರನ್ನು ಪ್ರತಿದಿನ 15 ನಿಮಿಷಗಳ ಕಾಲ ಭೇಟಿಯಾಗಲೂ ನ್ಯಾಯಾಲಯ ಅವಕಾಶ ನೀಡಿ ಆದೇಶ ಮಾಡಿತ್ತು.
ಈ ಬಗ್ಗೆ ಹೈಕೋರ್ಟ್ ಮೆಟ್ಟಿಲೇರಿದ ದೆಹಲಿ ಪೊಲೀಸರು ಸಂಸತ್ತು ಭದ್ರತಾ ಲೋಪ ಪ್ರಕರಣ ಸೂಕ್ಷ್ಮವಾಗಿದ್ದು ಭಯೋತ್ಪಾದನೆಗೆ ಸಂಬಂಧಿಸಿದೆ. ಆದ್ದರಿಂದ ಗೌಪ್ಯತೆ ಕಾಪಾಡಿಕೊಳ್ಳುವುದು ಅಗತ್ಯ ಎಂದು ನ್ಯಾಯಾಲಯದ ಮುಂದೆ ಹೇಳಿದ್ದಾರೆ.
ಪ್ರಕರಣದ ಹಿನ್ನೆಲೆ: ಡಿಸೆಂಬರ್ 13 ರಂದು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಭಾರಿ ಭದ್ರತಾ ಲೋಪ ಸಂಭವಿಸಿತ್ತು. ಲೋಕಸಭೆ ಕಲಾಪ ನಡೆಯುತ್ತಿದ್ದ ವೇಳೆ ಇಬ್ಬರು ಯುವಕರು ವೀಕ್ಷಕರು ಕೂರುವ ಗ್ಯಾಲರಿಯಿಂದ ಸದನದೊಳಗೆ ಜಿಗಿದಿದ್ದರು. ಇದರಿಂದ ಲೋಕಸಭೆ ಕಲಾಪಕ್ಕೆ ತೀವ್ರ ಅಡ್ಡಿಯಾಗಿತ್ತು. ದಿಢೀರ್ ಗ್ಯಾಲರಿಯಿಂದ ಜಿಗಿದ ಯುವಕರಿಬ್ಬರು ಸ್ಮೋಕ್ ಕ್ರ್ಯಾಕರ್ವೊಂದನ್ನು ಸ್ಪ್ರೇ ಮಾಡಿದ್ದರು.
ಆಗ ಸದನದಲ್ಲಿದ್ದ ಕೇಂದ್ರ ಸಚಿವರು, ಸಂಸದರು ಆತಂಕದಿಂದ ಹೊರ ಬಂದಿದ್ದರು. ಇದೇ ವೇಳೆ, ಹೊರಗಿನ ಗೇಟ್ ಬಳಿಯೂ ಯುವತಿಯೊಬ್ಬಳು ಇದೇ ರೀತಿ ಬಣ್ಣವನ್ನು ಸ್ಪ್ರೇ ಮಾಡಿದ್ದಳು. ಸಂಸತ್ ಭವನದ ಮೇಲಿನ ದಾಳಿಯ ವರ್ಷಾಚರಣೆಯಂದೇ ಈ ಭದ್ರತಾ ಲೋಪವಾಗಿದ್ದು ಭಾರಿ ಆತಂಕಕ್ಕೆ ಕಾರಣವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೂ ಒಟ್ಟು 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಸಂಸತ್ ಭದ್ರತಾ ಲೋಪ ಪ್ರಕರಣ; ಬಾಗಲಕೋಟೆಯಲ್ಲಿ ಟೆಕ್ಕಿ ಪೊಲೀಸ್ ವಶಕ್ಕೆ