ನವದೆಹಲಿ: ನಿಷೇಧಿತ ಸ್ಟೂಡೆಂಟ್ ಇಸ್ಲಾಮಿಕ್ ಮೂಮೆಂಟ್ ಆಫ್ ಇಂಡಿಯಾ (ಸಿಮಿ) ಸಂಘಟನೆಯ ಸದಸ್ಯನನ್ನು ದೆಹಲಿ ಪೊಲೀಸರ ವಿಶೇಷ ಘಟಕ ಬಂಧಿಸಿದೆ. ಈ ವ್ಯಕ್ತಿ ಸುಮಾರು 19 ವರ್ಷಗಳಿಂದ ದೇಶದ್ರೋಹ ಹಾಗೂ ಕಾನೂನುಬಾಹಿರ ಚಟುವಟಿಕೆಗಳ ಆರೋಪದಲ್ಲಿ ಬೇಕಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಬ್ದುಲ್ಲಾ ಬಂಧಿತ ಆರೋಪಿಯಾಗಿದ್ದು, ಜಾಕಿರ್ ನಗರದಿಂದ ಆತನನ್ನು ಬಂಧಿಸಲಾಗಿದೆ. ಎಸಿಪಿ ಅಂತಾರ್ ಸಿಂಗ್ ಇಬ್ಬರು ಅಧಿಕಾರಿಗಳ ತಂಡವೊಂದನ್ನು ರಚಿಸಿದ್ದು, ಈ ತಂಡ ಅಬ್ದುಲ್ಲಾ ಪತ್ತೆಗಾಗಿ ಪಟ್ಟು ಬಿಡದೇ ಕೆಲಸ ಮಾಡಿತ್ತು. ಅಬ್ದುಲ್ಲಾ ಜಾಕಿರ್ ನಗರಕ್ಕೆ ಬರುವ ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಯಾಚರಣೆ ಮಾಡಿ, ಬಂಧಿಸಲಾಗಿದೆ ಎಂದು ಪೊಲೀಸ್ ಡೆಪ್ಯುಟಿ ಕಮೀಷನರ್ ಪ್ರಮೋದ್ ಸಿಂಗ್ ಹೇಳಿದ್ದಾರೆ.
ಓದಿ: ಮುಂಬೈ ದಾಳಿ ಆರೋಪಿ ತಹವ್ವೂರ್ ರಾಣಾ ಬಿಡುಗಡೆಗೆ ಅಮೆರಿಕ ಸರ್ಕಾರ ಆಕ್ಷೇಪ
ಅಬ್ದುಲ್ಲಾ ಸಿಮಿಯ ಸಕ್ರಿಯ ಸದಸ್ಯನಾಗಿದ್ದು, ಮುಸ್ಲಿಂ ಯುವಕರು ಸಂಘಟನೆಗೆ ಸೇರಲು ಪ್ರೋತ್ಸಾಹ ನೀಡುತ್ತಿದ್ದನು ಎಂದು ತಿಳಿದು ಬಂದಿದೆ. ಜಾಕಿರ್ ನಗರದಲ್ಲಿ ಈತನ ಚಲನವಲನಗಳನ್ನು ಪತ್ತೆ ಹಚ್ಚುವ ಸಲುವಾಗಿ ಕ್ಯಾಮೆರಾ ಕೂಡಾ ಅಳವಡಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
2001ರಲ್ಲಿ, ಕೆಲವು ಸಿಮಿ ಕಾರ್ಯಕರ್ತರನ್ನು ಬಂಧಿಸಿದ್ದಾಗ ಅಬ್ದುಲ್ಲಾ ಪರಾರಿಯಾಗಿದ್ದನು. ಈಗ ಜಾಕಿರ್ ನಗರದಲ್ಲಿ ಆತನನ್ನು ಬಂಧಿಸಲಾಗಿದೆ.