ನವದೆಹಲಿ: ದೆಹಲಿ, ರಾಷ್ಟ್ರೀಯ ರಾಜಧಾನಿ ಪ್ರದೇಶದ ನಾಗರಿಕ ಸೇವೆಗಳ ಮೇಲೆ ಕೇಂದ್ರ ಸರ್ಕಾರ ತನ್ನ ಹಿಡಿತ ಸಾಧಿಸಲು ಹೊರಡಿಸಿರುವ ಸುಗ್ರೀವಾಜ್ಞೆ ವಿರುದ್ಧ ದೆಹಲಿ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಐವರು ನ್ಯಾಯಾಧೀಶರ ಸಂವಿಧಾನ ಪೀಠದ ಮುಂದೆ ವಿಚಾರಣೆಗೆ ಒಳಪಡಿಸಬೇಕಾಗಬಹುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, 2018 ರಲ್ಲಿ ಮತ್ತು ಮೇ 11, 2023 ರಂದು ನೀಡಲಾದ ಸಂವಿಧಾನ ಪೀಠದ ತೀರ್ಪುಗಳು, ಆರ್ಟಿಕಲ್ 239 ಎಎ (7) ರ ಅಡಿ ಕರಡು ರಚನೆಗೆ ಅಧಿಕಾರ ಇದೆಯೇ ಎನ್ನುವ ಅಂಶವನ್ನು ಪರಿಗಣಿಸಿಲ್ಲ ಎಂದು ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. ಪೀಠವು ವಿಚಾರಣೆಯನ್ನು ಜುಲೈ 20ಕ್ಕೆ ಮುಂದೂಡಿದೆ.
ಮೊದಲ ಬಾರಿಗೆ ದೆಹಲಿ ಸರ್ಕಾರದ ವ್ಯಾಪ್ತಿಯಿಂದ ಹೊರಗಿರುವ ಸೇವೆಗಳನ್ನು ತೆಗೆದುಕೊಳ್ಳಲು ಕೇಂದ್ರವು 239ಎಎ ವಿಧಿ 7 ರ ಅಡಿ ನೀಡಲಾದ ಅಧಿಕಾರವನ್ನು ಬಳಸಿದೆ ಎಂಬುದನ್ನು ಗಮನಿಸಿದೆ. ಆ ರೀತಿಯಲ್ಲಿ ಸಂವಿಧಾನ ತಿದ್ದುಪಡಿ ಮಾಡಲಾಗಿದೆ. ಇದಕ್ಕೆ ಅನುಮತಿ ಇದೆಯೇ ಎಂಬುದನ್ನು ನ್ಯಾಯಾಲಯ ಪರಿಶೀಲನೆ ಮಾಡಬೇಕಿದೆ ಎಂದು ಹೇಳಿದ ಪೀಠವು, ಸುಗ್ರೀವಾಜ್ಞೆ ವಿರುದ್ಧದ ಅರ್ಜಿಯನ್ನು ಸಾಂವಿಧಾನಿಕ ಪೀಠ ವಿಚಾರಣೆ ನಡೆಸಬಹುದು ಎಂದು ಸೂಚಿಸಿತು.
ಸಂಸತ್ತಿನ ಪ್ರಕ್ರಿಯೆ ನಂತರ ಸುಗ್ರೀವಾಜ್ಞೆಯನ್ನು ಬೇರೆ ರೂಪದಲ್ಲಿ ಅಂಗೀಕರಿಸುವ ಸಾಧ್ಯತೆಯಿದೆ. ಆದ್ದರಿಂದ ಜುಲೈ 20 ರಂದು ಪ್ರಾರಂಭವಾಗುವ ಮುಂಗಾರು ಅಧಿವೇಶನದಲ್ಲಿ ಲೋಕಸಭೆಯ ಮುಂದೆ ಸುಗ್ರೀವಾಜ್ಞೆಯನ್ನು ಮಸೂದೆ ಮಂಡಿಸುವ ಮೂಲಕ ಉಭಯ ಸದನಗಳ ಒಪ್ಪಿಗೆ ಪಡೆಯಲಿರುವ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡುವಂತೆ ಕೇಂದ್ರದ ಪರವಾಗಿ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪೀಠವನ್ನು ಒತ್ತಾಯಿಸಿದರು.
ದೆಹಲಿ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಈ ವಿಷಯವನ್ನು ಸಂವಿಧಾನಿಕ ಪೀಠಕ್ಕೆ ಉಲ್ಲೇಖಿಸುವುದನ್ನು ವಿರೋಧಿಸುವುದಾಗಿ ತಿಳಿಸಿದರು. ಈ ವಿಚಾರವನ್ನು ಸಾಂವಿಧಾನಿಕ ಪೀಠಕ್ಕೆ ಉಲ್ಲೇಖಿಸುವ ಅಗತ್ಯವಿಲ್ಲ ಎನ್ನವುದನ್ನು ಪ್ರೂವ್ ಮಾಡಲು ಸಮಯ ಕೋರಿದ್ದು, ಮಾತ್ರವಲ್ಲದೇ ನ್ಯಾಯಾಲಯವು ಗುರುವಾರ ನಡೆಯುವ ವಿಚಾರಣೆ ವೇಳೆ ಸ್ವಲ್ಪ ಸಮಯ ನೀಡಬೇಕು ಎಂದು ಸಿಂಘ್ವಿ ಒತ್ತಿ ಹೇಳಿದರು.
ಸುಗ್ರೀವಾಜ್ಞೆಗೆ ಬದಲಾಗಿ ಜುಲೈ 20 ರಿಂದ ಪ್ರಾರಂಭವಾಗುವ ಸಂಸತ್ತಿನ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಾಗುವುದು ಎಂದು ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು. ಕೇಂದ್ರವು ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿದ್ದು, ಸಂವಿಧಾನದ 246 (4) ವಿಧಿ ಅಡಿ ಸಂಸತ್ತಿಗೆ ಕಾನೂನುಗಳನ್ನು ಮಾಡಲು ಅಧಿಕಾರ ಇದೆ ಎಂದು ಸುಗ್ರೀವಾಜ್ಞೆಯನ್ನು ಸಮರ್ಥಿಸಿಕೊಂಡಿದೆ.
2023 ರ ಮೇ 19ರಂದು ಕೇಂದ್ರ ಸರ್ಕಾರ ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ (ತಿದ್ದುಪಡಿ) ಸುಗ್ರೀವಾಜ್ಞೆ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಆಮ್ ಆದ್ಮಿ ಪಕ್ಷ ಆಡಳಿತವಿರುವ ದೆಹಲಿ ಸರ್ಕಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಈ ಕುರಿತು ಸುಪ್ರೀಂ ಕೋರ್ಟ್ ಕಳೆದ ವಾರ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿತ್ತು. ಕೇಂದ್ರದಿಂದ ಪ್ರತಿಕ್ರಿಯೆ ಕೋರಿದ್ದ ಸುಪ್ರೀಂ ಕೋರ್ಟ್ ಸುಗ್ರೀವಾಜ್ಞೆಗೆ ತಡೆಯಾಜ್ಞೆಗಾಗಿ ಮನವಿ ಪರಿಗಣಿಸಲು ವಿಚಾರಣೆಯನ್ನು ಜುಲೈ 17ಕ್ಕೆ ಅಂದರೆ ಇಂದಿಗೆ ಮುಂದೂಡಿತ್ತು.
ಇದನ್ನೂ ಓದಿ: ಸೆಂಟ್ರಲ್ ಗವರ್ನಮೆಂಟ್ ಸುಗ್ರೀವಾಜ್ಞೆಗೆ ತಡೆ ನೀಡಲು ನಿರಾಕರಿಸಿದ ಸುಪ್ರೀಂ: ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ