ಬಂಡಾ(ಉತ್ತರಪ್ರದೇಶ): ದೆಹಲಿಯಲ್ಲಿ ಯುವತಿಯನ್ನು ಕಾರಿನಡಿ ಎಳೆದೊಯ್ದ ಭೀಕರ ಘಟನೆ ಹಸಿರಾಗಿರುವಾಗಲೇ ಉತ್ತರಪ್ರದೇಶದಲ್ಲಿ ಅಂಥಹುದೇ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಡಿಕ್ಕಿ ಹೊಡೆದ ಲಾರಿ ಸ್ಕೂಟಿಯ ಸಮೇತ ಮಹಿಳೆಯನ್ನು 3 ಕಿಮೀ ಎಳೆದೊಯ್ದಿದೆ. ಘರ್ಷಣೆಯಿಂದ ಬೈಕ್ ಮತ್ತು ಲಾರಿಗೆ ಬೆಂಕಿ ತಾಗಿ ಮಹಿಳೆ ಸಜೀವ ದಹನವಾಗಿದ್ದಾರೆ. ಇದು ಭಾರಿ ಪ್ರತಿಭಟನೆಗೆ ಕಾರಣವಾಗಿದೆ.
ಬಂಡಾ ಜಿಲ್ಲೆಯಲ್ಲಿ ಈ ದಾರುಣ ನಡೆದಿದ್ದು, ಕೃಷಿ ವಿಶ್ವವಿದ್ಯಾಲಯದ ಮಹಿಳಾ ಉದ್ಯೋಗಿ ಪ್ರಾಣ ಕಳೆದುಕೊಂಡವರು. ಮಹಿಳಾ ಉದ್ಯೋಗಿ ಸ್ಕೂಟಿಗೆ ಪೆಟ್ರೋಲ್ ತುಂಬಿಸಿಕೊಳ್ಳಲು ಹೋಗುತ್ತಿದ್ದಾಗ ರಭಸವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಈ ವೇಳೆ, ಮಹಿಳೆ ಮತ್ತು ಸ್ಕೂಟಿ ಲಾರಿಯಡಿ ಸಿಲುಕಿಕೊಂಡಿದೆ. ಚಾಲಕ ಲಾರಿ ನಿಲ್ಲಿಸದೇ 3 ಕಿಮೀ ದೂರ ಹಾಗೆಯೇ ಎಳೆದೊಯ್ದಿದ್ದಾನೆ. ಇದರಿಂದ ಘರ್ಷಣೆ ಉಂಟಾಗಿ ಸ್ಕೂಟಿಗೆ ಬೆಂಕಿ ಹೊತ್ತಿಕೊಂಡಿದೆ. ಅದು ಲಾರಿಗೂ ವ್ಯಾಪಿಸಿದ್ದರಿಂದ ಹೆದ್ದಾರಿ ಮಧ್ಯೆಯೇ ನಿಲ್ಲಿಸಿ ಪರಾರಿಯಾಗಿದ್ದಾನೆ.
ಘಟನೆಯ ವಿವರ: ಕೃಷಿ ವಿಶ್ವವಿದ್ಯಾಲಯದ ಮಹಿಳಾ ಉದ್ಯೋಗಿಯೊಬ್ಬರು ಬುಧವಾರ ರಾತ್ರಿ ತಮ್ಮ ಸ್ಕೂಟಿಗೆ ಪೆಟ್ರೋಲ್ ತುಂಬಿಸಲು ಕೃಷಿ ವಿಶ್ವವಿದ್ಯಾಲಯದಿಂದ ಮಾವಾಯಿ ಗ್ರಾಮದಲ್ಲಿನ ಪೆಟ್ರೋಲ್ ಪಂಪ್‌ಗೆ ಹೋಗುತ್ತಿದ್ದರು. ಈ ವೇಳೆ, ಮಾವಾಯಿ ಬೈಪಾಸ್‌ನಲ್ಲಿ ಬರುತ್ತಿದ್ದಾಗ ವೇಗವಾಗಿ ಬಂದ ಲಾರಿಯೊಂದು ಸ್ಕೂಟಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಇದರಿಂದ ಸ್ಕೂಟಿ ಹಾಗೂ ಮಹಿಳೆ ಲಾರಿಯಡಿ ಸಿಲುಕಿಕೊಂಡಿದ್ದಾರೆ. ಇದನ್ನು ಕಂಡ ಚಾಲಕ ಲಾರಿ ನಿಲ್ಲಿಸದೇ ಹಾಗೇಯೆ ಓಡಿಸಿಕೊಂಡು ಹೋಗಿದ್ದಾನೆ. ಸುಮಾರು 3 ಕಿಲೋ ಮೀಟರ್ ಚಲಾಯಿಸಿಕೊಂಡು ಹಾಗೇ ಸಾಗಿದ್ದಾನೆ.
ಈ ವೇಳೆ ರಸ್ತೆ ಮತ್ತು ಸ್ಕೂಟಿಯ ಮಧ್ಯೆ ಘರ್ಷಣೆ ಉಂಟಾಗಿ ಬೆಂಕಿ ತಾಗಿದೆ. ಲಾರಿಗೂ ಅಗ್ನಿ ವ್ಯಾಪಿಸಿದ್ದನ್ನು ಕಂಡ ಚಾಲಕ ತಕ್ಷಣವೇ ಟ್ರಕ್ ನಿಲ್ಲಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಲಾರಿಯಡಿ ಸಿಲುಕಿದ್ದ ಮಹಿಳೆ ಸಜೀವ ದಹನವಾಗಿದ್ದಾಳೆ. ಸ್ಕೂಟಿ ಮತ್ತು ಲಾರಿ ಕೂಡ ಸುಟ್ಟು ಕರಕಲಾಗಿವೆ. ಮಾಹಿತಿ ತಿಳಿದ ಕೃಷಿ ವಿಶ್ವವಿದ್ಯಾಲಯದ ನೌಕರರು ಹಾಗೂ ವಿದ್ಯಾರ್ಥಿಗಳು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಭೀಕರತೆ ಕಂಡು ರೊಚ್ಚಿಗೆದ್ದ ನೌಕರರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಅಲ್ಲದೇ, ಹಲವು ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾನಿರತ ಜನರ ಮನವೊಲಿಸಿ ಸಮಾಧಾನಪಡಿಸಿದರು.
ಗಂಡನ ಮರಣಾನಂತರ ಮಹಿಳೆಗೆ ಸಿಕ್ಕಿದ್ದ ಕೆಲಸ: ಇನ್ನು ಕೃಷಿ ವಿಶ್ವವಿದ್ಯಾಲಯದಲ್ಲಿ ಮಹಿಳೆ ಇತ್ತೀಚೆಗಷ್ಟೇ ಉದ್ಯೋಗಕ್ಕೆ ಸೇರಿಕೊಂಡಿದ್ದರು. ಇದಕ್ಕೂ ಮೊದಲು ಅವರ ಪತಿ ವಿವಿಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷವಷ್ಟೇ ಈ ಮಹಿಳೆಯ ಪತಿ ಮೃತಪಟ್ಟಿದ್ದರು. ಅವರ ಕೆಲಸವನ್ನೇ ಈ ಮಹಿಳೆಗೆ ನೀಡಲಾಗಿತ್ತು. ಲಖನೌ ನಿವಾಸಿಯಾಗಿರುವ ಮಹಿಳೆ ಕೆಲಸ ನಿರ್ವಹಣೆಯ ವೇಳೆಯೇ ದಾರುಣವಾಗಿ ಮೃತಪಟ್ಟಿದ್ದಾರೆ.
ದೆಹಲಿ ಯುವತಿಯ ಭೀಕರ ಕೇಸ್: ಇದಕ್ಕೂ ಮೊದಲು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೊಸ ವರ್ಷದಂದೇ ಪಾರ್ಟಿ ಮುಗಿಸಿ ಹೋಗುತ್ತಿದ್ದ ಕಾರೊಂದು ಯುವತಿಯ ಸ್ಕೂಟಿಗೆ ಗುದ್ದಿ, ಆಕೆಯನ್ನು 4 ಕಿಲೋ ಮೀಟರ್ ದೂರ ಎಳೆದೊಯ್ದ ಭೀಕರ ಘಟನೆ ನಡೆದಿತ್ತು. ಇದು ದೇಶಾದ್ಯಂತ ಸದ್ದು ಮಾಡಿದೆ. ನಗರದ ಹೊರವಲಯದ ಕಾಂಝಾವಾಲಾ ಪ್ರದೇಶದಲ್ಲಿ ಜನವರಿ 1ರ ತಡರಾತ್ರಿ ಈ ಆಘಾತಕಾರಿ ಘಟನೆ ನಡೆದಿತ್ತು.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಆರೋಪಿಗಳು ಕುಡಿದು ವಾಹನ ಚಲಾಯಿಸಿ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದರು. ನಂತರ ಭಯದಲ್ಲಿ ಕಾರನ್ನು ಜೋರಾಗಿ ಓಡಿಸಿದ್ದರು. ಈ ವೇಳೆ ಯುವತಿ ಸಿಲುಕಿದ್ದು ಅವರಿಗೆ ಗೊತ್ತಾಗಿಲ್ಲರಲಿಲ್ಲ. ಹಲವು ಕಿಮೀ ದೂರ ಹೋದ ಬಳಿಕ ಪರಿಶೀಲಿಸಿದಾಗ ಯುವತಿ ಕಾರಿನಡಿ ಸಿಲುಕಿದ್ದು ಗೊತ್ತಾಯಿತು ಎಂದು ಆರೋಪಿಗಳು ಬಾಯ್ಬಿಟ್ಟಿದ್ದರು.
ಸೂಕ್ತ ತನಿಖೆಗೆ ಸೂಚಿಸಿದ್ದ ಅಮಿತ್ ಶಾ: ಮೃತ ಯುವತಿಯ ಕುಟುಂಬಸ್ಥರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿದ್ದರು. ಪೊಲೀಸರು ಇದನ್ನು ನಿರಾಕರಿಸಿದ್ದರು. ಇನ್ನು ಹೊಸ ವರ್ಷದಂದು ದೇಶಾದ್ಯಂತ ಅಲೆ ಎಬ್ಬಿಸಿದ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಾ ಆದೇಶ ನೀಡಿದ್ದರು.
ಪ್ರಕರಣ ರಾಜಕೀಯ ಕಿತ್ತಾಟಕ್ಕೂ ಕಾರಣವಾಗಿ ಆಪ್ ಕಾರ್ಯಕರ್ತರು ದೆಹಲಿ ಲೆಫ್ಟಿನೆಂಟ್ ಗವರ್ನರ್ ನಿವಾಸದ ಮುಂದೆ ತೀವ್ರ ಪ್ರತಿಭಟನೆ ನಡೆಸಿದ್ದರು. ನಿವಾಸಕ್ಕೆ ನುಗ್ಗಲು ಯತ್ನಿಸಿದಾಗ ಇದನ್ನು ತಡೆಯಲು ಪೊಲೀಸರು ಜಲಫಿರಂಗಿ ಬಳಸಿದ್ದರು.
ಓದಿ: ಕಾರಿನಡಿ ಸಿಲುಕಿ ದೆಹಲಿ ಯುವತಿ ಸಾವು: ಲೆಫ್ಟಿನೆಂಟ್ ಗವರ್ನರ್ ನಿವಾಸದ ಮುಂದೆ ಭಾರಿ ಪ್ರತಿಭಟನೆ