ನವದೆಹಲಿ: ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು 'ದೆಹಲಿ ಚಲೋ' ಪ್ರತಿಭಟನಾ ಮೆರವಣಿಗೆಯನ್ನು ನಡೆಸುತ್ತಿದ್ದು, ಈ ಹಿನ್ನೆಲೆ ದೆಹಲಿಯ ನೆರೆಯ ನಗರಗಳಿಂದ ರಾಷ್ಟ್ರ ರಾಜಧಾನಿಗೆ ಬರುವ ಮೆಟ್ರೋ ಸೇವೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.
ದೆಹಲಿಯಿಂದ ಎನ್‌ಸಿಆರ್ ವಿಭಾಗಗಳಿಗೆ ಮೆಟ್ರೋ ಸೇವೆ ಲಭ್ಯವಿರಲಿದೆ. ಮಧ್ಯಾಹ್ನ 2 ರಿಂದ ದೆಹಲಿಯಿಂದ ಎನ್‌ಸಿಆರ್ ವಿಭಾಗಗಳ ಕಡೆಗೆ ಮೆಟ್ರೋ ಸೇವೆ ಲಭ್ಯವಿದೆ. ಆದಾಗ್ಯೂ ಮುಂದಿನ ಸೂಚನೆ ಬರುವವರೆಗೂ ಭದ್ರತಾ ಕಾರಣದಿಂದ ಎನ್‌ಸಿಆರ್ ವಿಭಾಗಗಳಿಂದ ದೆಹಲಿಗೆ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ" ಎಂದು ಡಿಎಂಆರ್‌ಸಿ ಟ್ವಿಟ್ಟರ್ನಲ್ಲಿ ಹೇಳಿದೆ.
ರೈತರ ಪ್ರತಿಭಟನೆಯಿಂದಾಗಿ ರೈಲುಗಳು ಗುರುವಾರ ಮಧ್ಯಾಹ್ನ 2 ಗಂಟೆಯವರೆಗೆ ರಾಷ್ಟ್ರ ರಾಜಧಾನಿಯ ಗಡಿ ದಾಟುವುದಿಲ್ಲ ಎಂದು ಡಿಎಂಆರ್‌ಸಿ ಬುಧವಾರ ತಿಳಿಸಿತ್ತು.
ದೆಹಲಿಯನ್ನು ಸಂಪರ್ಕಿಸುವ ಐದು ಹೆದ್ದಾರಿಗಳ ಮೂಲಕ ರೈತರು ರಾಷ್ಟ್ರರಾಜಧಾನಿಗೆ ಬರಲಿದ್ದಾರೆ. ದೆಹಲಿ ಪೊಲೀಸರು ಪ್ರತಿಭಟನೆಗೆ ಸಂಬಂಧಿಸಿದಂತೆ ವಿವಿಧ ರೈತ ಸಂಸ್ಥೆಗಳಿಂದ ಬಂದ ಎಲ್ಲಾ ಮನವಿಗಳನ್ನು ತಿರಸ್ಕರಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆ ಯಾವುದೇ ಸಭೆ ನಡೆಸಲು ನಗರಕ್ಕೆ ಬಂದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಲಾಗಿದೆ.
ರಾಷ್ಟ್ರರಾಜಧಾನಿಯ ಗಡಿ ಪ್ರದೇಶಗಳಲ್ಲಿ ದೆಹಲಿ ಪೊಲೀಸ್ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ಒಳಬರುವ ಎಲ್ಲಾ ವಾಹನಗಳನ್ನು ಪರಿಶೀಲಿಸಲಾಗುತ್ತಿದೆ.