ನವದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಸೋಮವಾರ ಒಟ್ಟು 2,394 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. 2,394 ನಾಮಪತ್ರಗಳ ಪೈಕಿ 1,871 ಅಭ್ಯರ್ಥಿಗಳ ನಾಮಪತ್ರಗಳನ್ನು ಮಧ್ಯರಾತ್ರಿವರೆಗೂ ಅಪ್ಲೋಡ್ ಮಾಡಿದ್ದು ವಿಶೇಷವಾಗಿತ್ತು. ಉಳಿದವುಗಳನ್ನು ಇನ್ನೂ ಅಪ್‌ಲೋಡ್ ಮಾಡಲಾಗುತ್ತಿದೆ.
ನವೆಂಬರ್ 16 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ನವೆಂಬರ್ 19 ಕೊನೆಯ ದಿನವಾಗಿದೆ. 250 ವಾರ್ಡ್‌ಗಳಿಗೆ ಡಿಸೆಂಬರ್ 4 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 7 ರಂದು ಮತ ಎಣಿಕೆ ನಡೆಯಲಿದೆ.
ನಾಮಪತ್ರಗಳ ಸ್ವೀಕೃತಿ ಪ್ರಕ್ರಿಯೆಯು ಸುಗಮವಾಗಿ ಸಾಗಿದೆ. ಇದಕ್ಕಾಗಿ ಎಲ್ಲ ಚುನಾವಣಾಧಿಕಾರಿಗಳ ಪ್ರಧಾನ ಕಚೇರಿಯಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ಜಿಲ್ಲಾಧಿಕಾರಿಗಳು, ಪೊಲೀಸ್ ಉಪ ಆಯುಕ್ತರು ಮತ್ತು ಎಂಸಿಡಿ ಉಪ ಆಯುಕ್ತರು ಸಂಚಾರ, ವಾಹನ ನಿಲುಗಡೆ ಸೇರಿ ಸುಗಮ ವ್ಯವಸ್ಥೆಗೆ ಸೂಕ್ತ ಕ್ರಮ ಕೈಗೊಂಡಿದ್ದರು ಎಂದು ಎಸ್‌ಇಸಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಬಾರಿ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವೆ ಸ್ಪರ್ಧೆಯನ್ನು ನಿರೀಕ್ಷಿಸಲಾಗಿದೆ. ಇನ್ನು ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು MCD ಚುನಾವಣೆಯಲ್ಲಿ ಅಖಾಡಕ್ಕಿಳಿದಿದೆ.
ಇದನ್ನು ಓದಿ:2030ರ ವೇಳೆಗೆ 8.5 ಶತಕೋಟಿಗೆ ಜಗತ್ತಿನ ಜನಸಂಖ್ಯೆ ಹೆಚ್ಚಳದ ನಿರೀಕ್ಷೆ..