ದುರ್ಗ (ಛತ್ತೀಸ್‌ಗಢ): ನವದೆಹಲಿಯ ಅಂಗಡಿಯೊಂದರಿಂದ 25 ಕೋಟಿ ರೂಪಾಯಿಗೂ ಮೌಲ್ಯದ ಚಿನ್ನಾಭರಣಗಳನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢ ಪೊಲೀಸರು ಶುಕ್ರವಾರ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 18.5 ಕೆಜಿ ಚಿನ್ನ ಮತ್ತು ವಜ್ರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಲೋಕೇಶ್ ಶ್ರೀವಾಸ್ ಮತ್ತು ಶಿವ ಚಂದ್ರವಂಶಿ ಎಂದು ಗುರುತಿಸಲಾಗಿದೆ. ಶ್ರೀವಾಸ್ ಬಿಲಾಸ್‌ಪುರದಲ್ಲಿ ಏಳು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ದೆಹಲಿ ಪೊಲೀಸರು ಬಿಲಾಸ್‌ಪುರದಲ್ಲಿ ಶಂಕಿತನನ್ನು ವಿಚಾರಣೆಗೆ ಒಳಪಡಿಸಿದರು. ಆತನ ಮಾಹಿತಿ ಆಧರಿಸಿ, ಕವರ್ಧಾದಲ್ಲಿ ಅಡಗಿಕೊಂಡಿದ್ದ ಆರೋಪಿ ಶಿವ ಚಂದ್ರವಂಶಿ ಮೇಲೆ ದಾಳಿ ನಡೆಸಿದರು. ಶಿವ ಚಂದ್ರವಂಶಿಯಿಂದ ಪೊಲೀಸರು 23 ಲಕ್ಷ ರೂಪಾಯಿ ನಗದು ವಶಕ್ಕೆ ಪಡೆದುಕೊಂಡಿದ್ದಾರೆ. ವಿಷಯ ತಿಳಿದ ಪ್ರಮುಖ ಆರೋಪಿ ಲೋಕೇಶ್ ಪರಾರಿಯಾಗಿದ್ದನು.
ದೆಹಲಿ ಮತ್ತು ಬಿಲಾಸ್‌ಪುರ ಪೊಲೀಸರು, ದುರ್ಗ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಆರೋಪಿ ಲೋಕೇಶ್ನನ್ನು ಸ್ಮೃತಿ ನಗರದ ಮನೆಯೊಂದರಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ತಕ್ಷಣವೇ ಪೊಲೀಸರು ಲೋಕೇಶ್ನನ್ನು ಸ್ಮೃತಿ ನಗರದಲ್ಲಿ ಬಂಧಿಸಿದ್ದಾರೆ. ಆರೋಪಿಗಳಿಂದ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ದೆಹಲಿ ಪೊಲೀಸರು ಆರೋಪಿ ಲೋಕೇಶ್ನನ್ನು ವಶಕ್ಕೆ ಪಡೆದು ದೆಹಲಿಗೆ ಕರೆದುಕೊಂಡು ಹೋಗಿದ್ದಾರೆ. ದುರ್ಗ್, ಬಿಲಾಸ್‌ಪುರ ಮತ್ತು ದೆಹಲಿ ಪೊಲೀಸರಿಂದ ಜಂಟಿ ತನಿಖೆ ನಡೆಯುತ್ತಿದೆ.
''ಬಿಲಾಸ್‌ಪುರದ ಸಿವಿಲ್ ಲೈನ್ ಪೊಲೀಸ್ ಠಾಣೆ ವ್ಯಾಪ್ತಿಯ 10 ಅಂಗಡಿಗಳಲ್ಲಿ ಇತ್ತೀಚೆಗೆ ದರೋಡೆ ನಡೆಸಲಾಗಿದ್ದು, ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗಿದೆ. ಬಂಧಿತರಿಂದ ಕನಿಷ್ಠ 18.5 ಕೆಜಿ ಚಿನ್ನ ಮತ್ತು 12.5 ಲಕ್ಷ ರೂಪಾಯಿ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿ ಲೋಕೇಶ್ ವಿವಿಧ ರಾಜ್ಯಗಳಲ್ಲಿ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ'' ಎಂದು ಬಿಲಾಸ್‌ಪುರ ಸಿವಿಲ್ ಲೈನ್ ಪೊಲೀಸ್ ಠಾಣೆ ಟೌನ್ ಇನ್‌ಸ್ಪೆಕ್ಟರ್ ಪ್ರದೀಪ್ ಆರ್ಯ ತಿಳಿಸಿದ್ದಾರೆ.
ದರೋಡೆ ಪ್ರಕರಣದಲ್ಲಿ ಆರು ಆರೋಪಿಗಳ ಅರೆಸ್ಟ್: ಸೆ.6ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಕುದ್ಕಾಡಿಯಲ್ಲಿ ಮನೆ ಮಂದಿಯನ್ನು ಕಟ್ಟಿಹಾಕಿ ದರೋಡೆ ಮಾಡಿರುವ ಘಟನೆ ನಡೆದಿತ್ತು. ಈ ಪ್ರಕರಣವನ್ನು ಭೇದಿಸಿದ ಪೊಲೀಸರು ಕೇರಳ ಮೂಲದ ಐವರು ಸೇರಿದಂತೆ ಒಟ್ಟು ಆರು ಮಂದಿಯನ್ನು ಅರೆಸ್ಟ್ ಮಾಡಿ, ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದ್ದಾರೆ.
ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪೆರುವಾಯಿ ಗ್ರಾಮದ ನಿವಾಸಿ ಸುಧೀರ್(38), ಕೇರಳ ರಾಜ್ಯದ ಕಾಸರಗೋಡು ಪೈವಳಿಕೆ ಸಮೀಪದ ಮಂಜೇಶ್ವರ ಗ್ರಾಮದ ನಿವಾಸಿ ಕಿರಣ್ ಟಿ.(29), ಕಾಂಞಗಾಡ್ ಸಮೀಪದ ಮೂವರಿಕುಂಡ ಕಂಡತ್ತೀಲ್ ವೀಡು ನಿವಾಸಿ ಸನಾಲ್ ಕೆ.ವಿ.( 34), ಎಡನಾಡು ಗ್ರಾಮದ ನಿವಾಸಿ ಮಹಮ್ಮದ್ ಫೈಝಲ್(37), ಅಬ್ದುಲ್ ನಿಝಾರ್ (21) ಮತ್ತು ಮಂಜೇಶ್ವರ ತಾಲೂಕಿನ ಶೇಣಿ ಗ್ರಾಮದ ನಿವಾಸಿ ವಸಂತ ಎಂ.(31) ಎಂಬುವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ: 87 ಲಕ್ಷ ರೂ ಮೌಲ್ಯದ ಚಿನ್ನ ವಶ