ನವದೆಹಲಿ: ಪ್ರಧಾನಮಂತ್ರಿಗೆ ಭದ್ರತೆ ಒದಗಿಸಲು ನಿಯೋಜನೆಗೊಂಡಿರುವ ಎಸ್ಪಿಜಿಗೆ ಹೆಚ್ಚಿನ ಅಧಿಕಾರ ನೀಡುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನ ದೆಹಲಿ ಹೈಕೋರ್ಟ್ ಮುಂದೂಡಿಕೆ ಮಾಡಿದೆ. ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ನೇತೃತ್ವದ ಪೀಠ ಈ ಪ್ರಕರಣದ ವಿಚಾರಣೆಯನ್ನು ಏಪ್ರಿಲ್ಗೆ ಮುಂದೂಡಿ ಇಂದು ಮಹತ್ವದ ಆದೇಶ ಹೊರಡಿಸಿದೆ.
ವಿಚಾರಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಲು ಅರ್ಜಿದಾರರಿಗೆ ಆದೇಶ ನೀಡಲು ಹೈಕೋರ್ಟ್ ಮುಂದಾಗಿತ್ತು. ಆದರೆ, ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದು, ತನಿಖಾ ತಂಡ ಸಹ ರಚನೆ ಮಾಡಿರುವ ಕಾರಣ ಯಾವುದೇ ರೀತಿಯ ಆದೇಶ ನೀಡದೇ ವಿಚಾರಣೆ ಮುಂದೂಡಿದೆ.
ಕಳೆದ ಕೆಲ ವಾರಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಅವರಿಗೆ ಭದ್ರತಾ ಲೋಪ ಉಂಟಾಗಿದ್ದು, ಸುಮಾರು 20 ನಿಮಿಷಗಳ ಕಾಲ ಫ್ಲೈ-ಓವರ್ನಲ್ಲಿ ಸಿಲುಕಿಕೊಂಡಿದ್ದರು. ಈ ವಿಷಯ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯ ತನಿಖೆಗೆ ಆದೇಶ ನೀಡಿದೆ.
ಇದನ್ನೂ ಓದಿರಿ: ಆನ್ಲೈನ್ ತರಗತಿ ವೇಳೆ ದಿಢೀರ್ ಅರೆನಗ್ನ ಡ್ಯಾನ್ಸ್.. ತನಿಖೆಗೆ ಸೂಚನೆ ನೀಡಿದ ಶಿಕ್ಷಣ ಸಚಿವ
ಇದರ ಬೆನ್ನಲ್ಲೇ ಆಶಿಶ್ ಕುಮಾರ್ ಎಂಬ ಅರ್ಜಿದಾರನೋರ್ವ ಪ್ರಧಾನಿಗೆ ಭದ್ರತೆ ನೀಡುವ ಎಸ್ಪಿಜಿಗೆ ಹೆಚ್ಚಿನ ಅಧಿಕಾರ ನೀಡುವಂತೆ ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಗೋವಿಂದ್ ರಾಮನ್ ಅವರು ಪ್ರಧಾನಿಯವರ ಭದ್ರತೆ ಅತಿ ಮುಖ್ಯವಾಗಿದ್ದು, ಇದೇ ಕಾರಣಕ್ಕಾಗಿ ಅರ್ಜಿ ಸಲ್ಲಿಕೆಯಾಗಿದೆ ಎಂದರು.
ಸಲ್ಲಿಕೆಯಾಗಿರುವ ಅರ್ಜಿಯಲ್ಲಿ ಏನಿದೆ?.. ಎಸ್ಪಿಜಿ ಕಾಯ್ದೆ ಬದಲಾವಣೆ ಮಾಡಿ, ಹೆಚ್ಚಿನ ಅಧಿಕಾರ ನೀಡುವಂತೆ ಆಗ್ರಹ ಮಾಡಲಾಗಿದ್ದು, ರಾಜ್ಯದ ಏಜೆನ್ಸಿಗಳು ಯಾವೆಲ್ಲ ಕ್ರಮ ಕೈಗೊಂಡಿವೆ ಎಂದು ಪರಿಶೀಲನೆ ನಡೆಸಲು ಎಸ್ಪಿಜಿಗೆ ಅಧಿಕಾರ ನೀಡಬೇಕು. ವಿವಿಧ ರಾಜ್ಯಗಳಿಗೆ ಪ್ರಧಾನಿ ಪ್ರವಾಸ ಕೈಗೊಂಡಾಗ ಅಲ್ಲಿನ ಭದ್ರತಾ ವ್ಯವಸ್ಥೆ ಪರಿಶೀಲನೆಗೋಸ್ಕರ ಎಸ್ಪಿಜಿ ನಿರ್ದೇಶಕರು ಮುಕ್ತರಾಗಿರಬೇಕು ಎಂದು ಆಗ್ರಹಿಸಲಾಗಿದೆ.
ಜಾಹೀರಾತು- ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ