ನವದೆಹಲಿ: ಆಧುನಿಕ ಔಷಧ ಮತ್ತು ವೈದ್ಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಯೋಗ ಗುರು ರಾಮದೇವ್ ಅವರ ವಿರುದ್ಧ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಆಫ್ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಜುಲೈ 30ಕ್ಕೆ ಮುಂದೂಡಿದೆ.
ಅಲೋಪತಿ ಕುರಿತು ಹೇಳಿಕೆ ನೀಡಿದ್ದಕ್ಕಾಗಿ ಪ್ರತಿವಾದಿ ರಾಮದೇವ್ ವಿರುದ್ಧ ಶಾಶ್ವತ ತಡೆಯಾಜ್ಞೆ ಕೋರಿ ಏಮ್ಸ್ ವೈದ್ಯರ ಸಂಘವು ದೆಹಲಿ ಹೈಕೋರ್ಟ್ಗೆ ಮನವಿ ಸಲ್ಲಿಸಿದೆ. ಈ ಕುರಿತು ಇಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಹರಿಶಂಕರ್ ಅವರ ಏಕ - ನ್ಯಾಯಾಧೀಶ ಪೀಠವು, ವಿಚಾರಣೆಯನ್ನು ಜುಲೈ 30ಕ್ಕೆ ಮುಂದೂಡಿದೆ.
ರಾಮ್‌ದೇವ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 188 (ಸಾರ್ವಜನಿಕ ಸೇವಕರ ಸರಿಯಾದ ಆದೇಶಕ್ಕೆ ಅಸಹಕಾರ), 269 (ರೋಗದ ಸೋಂಕು ಜೀವಕ್ಕೆ ಅಪಾಯಕಾರಿಯಾಗಿ ಹರಡುವ ಸಾಧ್ಯತೆ), 504 (ಶಾಂತಿ ಉಲ್ಲಂಘನೆ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ)ಅಡಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ವಿಪತ್ತು ನಿರ್ವಹಣಾ ಕಾಯ್ದೆ 2005ರ ಇತರ ನಿಬಂಧನೆಗಳ ಅಡಿ ಸಹ ಪ್ರಕರಣ ದಾಖಲಾಗಿದೆ.
ಅಲೋಪತಿ ಒಂದು ಅವಿವೇಕಿ ವಿಜ್ಞಾನ ಮತ್ತು ರೆಮ್ಡೆಸಿವಿರ್, ಫ್ಯಾಬಿಫ್ಲೂ ಮತ್ತು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮೋದಿಸಿದ ಔಷಧಿಗಳು ಕೊರೊನಾ ಸೋಂಕಿತರ ಆರೋಗ್ಯ ಉತ್ತಮಗೊಳಿಸಲು ವಿಫಲವಾಗಿವೆ ಎಂದು ರಾಮ್‌ದೇವ್ ವಿಡಿಯೋ ಹೇಳಿಕೆ ನೀಡಿದ್ದರು. ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಐಎಂಎ, ಬಾಬಾಗೆ ನೋಟಿಸ್ ನೀಡಿತ್ತು.