ನವದೆಹಲಿ: ದೆಹಲಿ ಪೊಲೀಸ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ರಾಕೇಶ್ ಕುಮಾರ್ ರಾಷ್ಟ್ರ ರಾಜಧಾನಿಯ ಲೋಧಿ ಶವಾಗಾರದಲ್ಲಿ 20 ಕ್ಕೂ ಹೆಚ್ಚು ದಿನಗಳಿಂದ ವಾರಸುದಾರರಿಲ್ಲದ ಮೃತದೇಹಗಳಿಗೆ ಅಂತಿಮ ವಿಧಿಗಳನ್ನು ನೆರವೇರಿಸುತ್ತಿದ್ದಾರೆ.
ಏಪ್ರಿಲ್ 13 ರಿಂದ ಇಲ್ಲಿಯವರೆಗೆ ರಾಕೇಶ್ ಕುಮಾರ್ 50 ಕ್ಕೂ ಹೆಚ್ಚು ಶವಗಳಿಗೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಶವಾಗಾರದಲ್ಲಿ ಸುಮಾರು 1,100 ಶವಗಳ ಅಂತ್ಯಕ್ರಿಯೆಗೆ ಸಹಕರಿಸಿದ್ದಾರೆ. ರಾಕೇಶ್ ಕುಮಾರ್, ಹಜರತ್ ನಿಜಾಮುದ್ದೀನ್ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಮೇ 7 ರಂದು ನಡೆಯಬೇಕಿದ್ದ ಮಗಳ ಮದುವೆಯನ್ನು ಸಹ ಮುಂದೂಡಿದ್ದಾರೆ.
"56 ವರ್ಷ ವಯಸ್ಸಿನ ಎಎಸ್‌ಐ ರಾಕೇಶ್ ಕುಮಾರ್ ಏಪ್ರಿಲ್ 13 ರಿಂದ ಲೋಧಿ ರಸ್ತೆಯ ಶವಾಗಾರದಲ್ಲಿ ಕರ್ತವ್ಯದಲ್ಲಿದ್ದು, 1,100 ಕ್ಕೂ ಹೆಚ್ಚು ಜನರ ಕೊನೆಯ ವಿಧಿ ವಿಧಾನಗಳಿಗೆ ಸಹಾಯ ಮಾಡಿದ್ದಾರೆ. 50 ಕ್ಕೂ ಹೆಚ್ಚು ಶವಗಳಿಗೆ ಸ್ವತಃ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ" ಎಂದು ದೆಹಲಿ ಪೊಲೀಸರು ತಮ್ಮ ಅಧಿಕೃತ ಟ್ವಿಟ್ಟರ್ ಅಕೌಂಟ್ನಲ್ಲಿ ಬರೆದುಕೊಂಡಿದ್ದಾರೆ.
"ನಾನು ಎರಡೂ ಡೋಸ್ ಲಸಿಕೆಗಳನ್ನು ತೆಗೆದುಕೊಂಡಿದ್ದೇನೆ. ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುತ್ತಿದ್ದೇನೆ. ಇಲ್ಲಿನ ಜನರಿಗೆ ಸಹಾಯ ಮಾಡಲು ನನ್ನ ಮಗಳ ಮದುವೆಯನ್ನು ಮುಂದೂಡಿದ್ದೇನೆ" ಎಂದು ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿರಿ: 'ಕರ್ನಾಟಕಕ್ಕೆ 1,200 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಸಿ': ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂಕೋರ್ಟ್