ನವದೆಹಲಿ: ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹೀಗಾಗಿ ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಳ್ಳುತ್ತಿದ್ದು, ಮತ್ತೆ ಮಾಸ್ಕ್ ಕಡ್ಡಾಯದ ಮೊರೆ ಹೋಗಿವೆ. ಶುಕ್ರವಾರದಿಂದ ದೆಹಲಿ ಮತ್ತು ತಮಿಳುನಾಡಿನಲ್ಲಿ ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸುವ ನಿಯಮ ಜಾರಿಗೆ ಬಂದಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್ ಸೋಂಕು ಹೆಚ್ಚಳ ಕುರಿತಂತೆ ಲೆಫ್ಟಿನೆಂಟ್ ಗವರ್ನರ್ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಸಭೆಯ ನಂತರ ಮಾಸ್ಕ್ ಧರಿಸದವರಿಗೆ 500 ರೂ. ದಂಡ ವಿಧಿಸುವ ಆದೇಶ ಜಾರಿ ಮಾಡಲಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧಾರಣೆ ಕಡ್ಡಾಯ ಮಾಡಲಾಗಿದೆ. ಒಂದು ವೇಳೆ ಧರಿಸದೇ ಇದ್ದರೆ, ಅದು ಅಪರಾಧವಾಗಲಿದೆ. ಇದಕ್ಕಾಗಿ 500 ರೂ. ದಂಡ ವಿಧಿಸಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಸ ಆದೇಶದಲ್ಲಿ ತಿಳಿಸಿದೆ.
ತಮಿಳುನಾಡು ಸರ್ಕಾರ ಕೂಡ ಮಾಸ್ಕ್ ಧರಿಸದವರಿಗೆ 500 ರೂ. ದಂಡ ವಿಧಿಸಲು ತೀರ್ಮಾನಿಸಿದೆ. ಕೋವಿಡ್ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾರ್ಸ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಾಸ್ಕ್ ಹಾಕಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.
110 ಕೋಟಿ ರೂ. ದಂಡ ವಸೂಲಿ: ತಮಿಳುನಾಡಿನಲ್ಲಿ ಇದುವರೆಗೆ ಮಾಸ್ಕ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 110 ಕೋಟಿ ರೂ.ಗೂ ಅಧಿಕ ದಂಡವನ್ನು ರಾಜ್ಯ ಸರ್ಕಾರ ವಸೂಲಿ ಮಾಡಿದೆ. ಅಂದಾಜು 66 ಲಕ್ಷ ಜನರಿಂದ ಇಷ್ಟೊಂದು ಮೊತ್ತದ ದಂಡ ಸಂಗ್ರಹವಾಗಿದೆ. ಆದರೆ, ಇತ್ತೀಚಿಗೆ ಸೋಂಕಿನ ಪ್ರಮಾಣ ಕಡಿಮೆಯಾದ ಕಾರಣ ಮಾಸ್ಕ್ ಅಗತ್ಯವಿರಲಿಲ್ಲ. ಈಗ ಮತ್ತೆ ಮಾಸ್ಕ್ ಕಡ್ಡಾಯ ಮಾಡಿದ್ದೇವೆ ಎಂದು ಆರೋಗ್ಯ ಇಲಾಖೆಯ ಕಾರ್ಯದರ್ಶಿ ಜೆ.ರಾಧಾಕೃಷ್ಣನ್ ಮಾಹಿತಿ ನೀಡಿದರು.
ಇದನ್ನೂ ಓದಿ: ನನ್ನ ತೋಳಿಗೆ ಭಾರತದ ಕೋವಿಡ್ ಲಸಿಕೆ ಹಾಕಲಾಗಿದೆ, ಭಾರತಕ್ಕೆ ಧನ್ಯವಾದ: ಬ್ರಿಟನ್ ಪ್ರಧಾನಿ