ನವದೆಹಲಿ: ದೇವಾಲಯದ ಪುರೋಹಿತರು ದೇವಸ್ಥಾನಕ್ಕೆ ಸೇರಿದ ಭೂಮಿಯ ಮಾಲೀಕರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ದೇವಾಲಯದ ಭೂಮಿಯ ಮಾಲೀಕತ್ವ ದೇವರಿಗೆ ಸೇರಿದೆ ಎಂದು ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿ ಹೇಮಂತ್ ಗುಪ್ತಾ ಮತ್ತು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನೊಳಗೊಂಡ ಪೀಠವು ಅರ್ಚಕರ ಪಾತ್ರವು ಕೇವಲ ದೇವಸ್ಥಾನದ ನಿರ್ವಹಣೆಯಾಗಿದೆ ಎಂದು ಸ್ಪಷ್ಟಪಡಿಸಿತು.
ದೇವಾಲಯಗಳಿಗೆ ಸೇರಿದ ಆಸ್ತಿಗಳನ್ನು ಅಕ್ರಮವಾಗಿ ಮಾರಾಟ ಮಾಡುವುದನ್ನು ತಡೆಯಲು ಎಂಪಿ ಕಾನೂನಿನ ಕಂದಾಯ ಸಂಹಿತ-1959ರ ಅಡಿಯಲ್ಲಿ ಕಂದಾಯ ದಾಖಲೆಗಳಿಂದ ಅರ್ಚಕರ ಹೆಸರನ್ನು ತೆಗೆದುಹಾಕಲು ಆದೇಶ ಹೊರಡಿಸಿತ್ತು. ಈ ಆದೇಶವನ್ನು ರಾಜ್ಯ ಹೈಕೋರ್ಟ್ ರದ್ದುಗೊಳಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಇದೀಗ ದೇಶದ ಸರ್ವೋಚ್ಚ ನ್ಯಾಯಲಯ ದೇವಾಲಯದ ಆಸ್ತಿಗೆ ಪುರೋಹಿತ ಮಾಲೀಕ ಎಂದು ಪರಿಗಣಿಸಬಾರದು. ದೇವಸ್ಥಾನದ ಭೂಮಿಯ ಮಾಲೀಕರ ವಿವರಗಳಲ್ಲಿ ದೇವರ ಹೆಸರನ್ನು ಮಾತ್ರ ಸೇರಿಸಬೇಕು ಎಂದು ಹೇಳಿದೆ.
ಅರ್ಚಕ ಬಾಡಿಗೆದಾರ ಎಂಬುದು ಕಾನೂನುಗಳಲ್ಲಿ ಸ್ಪಷ್ಟವಾಗಿದೆ ಎಂದು ಕೋರ್ಟ್ ಹೇಳಿದೆ. ಹಾಗಾಗಿ ಕಂದಾಯ ದಾಖಲೆಗಳಲ್ಲಿ ಪೂಜಾರಿ ಮತ್ತು ಆಡಳಿತಾಧಿಕಾರಿಯ ಹೆಸರನ್ನು ಹೊಂದಿರುವುದು ಅಗತ್ಯವಲ್ಲ ಎಂದು ಅಭಿಪ್ರಾಯಪಟ್ಟಿದೆ.