ಬೋಲಂಗಿರ್: ಒಡಿಶಾದ ಬೋಲಂಗಿರ್ ಜಿಲ್ಲೆಯ ಸಾಲೆಪಾಲಿ ಪಟ್ಟಣದ ಬೀಗ ಹಾಕಿದ ಮನೆಯ ಕೋಣೆಯೊಂದರಲ್ಲಿ ಯುವಕನ ಮೃತದೇಹವೊಂದು 12 ತುಂಡುಗಳಾಗಿ ಕತ್ತರಿಸಿ ಪಾಲಿಥಿನ್ ಬ್ಯಾಗ್ನಲ್ಲಿ ಪ್ಯಾಕ್ ಮಾಡಿದ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದೆ. ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೃತರನ್ನು ರಿಂಕು ಮೆಹರ್ (27) ಎಂದು ಗುರುತಿಸಲಾಗಿದೆ.
ವರದಿಗಳ ಪ್ರಕಾರ, ಮನೆಯ ಒಳಗಿಂದ ಕೆಟ್ಟ ವಾಸನೆ ಬರುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಬೋಳಂಗಿರ್ ನಗರ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಮನೆ ಬಾಗಿಲು ಒಡೆದು ಒಳಹೋದಾಗ, ದೇಹದ ಭಾಗಗಳನ್ನು ಕತ್ತರಿಸಿ ಏಳು ಕ್ಯಾರಿ ಬ್ಯಾಗ್ಗಳಲ್ಲಿ ಪ್ಯಾಕ್ ಮಾಡಲಾಗಿತ್ತು. ಜೊತೆಗೆ, ಮೃತದೇಹ ಕೊಳೆತ ಸ್ಥಿತಿಯಲ್ಲಿತ್ತು.
ಮಾಹಿತಿಯ ಪ್ರಕಾರ, ರಿಂಕು ಮೆಹರ್ ತನ್ನ ಕಿರಿಯ ಸಹೋದರ ಹಾಗೂ ಪೋಷಕರೊಂದಿಗೆ ಸಾಲೇಪಾಲಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಕೆಲವು ದಿನಗಳ ಹಿಂದೆ (ಸುಮಾರು 20 ದಿನಗಳು) ರಿಂಕು ತನ್ನ ತಂದೆ ಹಾಗೂ ತಾಯಿಗೆ ಹೊಡೆದಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಬುರ್ಲಾ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ರಿಂಕು ಕಿರಿಯ ಸಹೋದರ ತಂದೆ ತಾಯಿಯನ್ನು ನೋಡಿಕೊಳ್ಳಲು ಆಸ್ಪತ್ರೆಗೆ ಹೋದವರು ಮತ್ತೆ ಮನೆ ಕಡೆಗೆ ಬಂದಿಲ್ಲ. ಇತ್ತ ಮನೆಯಲ್ಲಿ ರಿಂಕು ಅವರು ಒಬ್ಬರೇ ಮನೆಯಲ್ಲಿದ್ದರು. ಇದಾದ ಕೆಲ ದಿನಗಳ ಬಳಿಕ ಮನೆಯಿಂದ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಬೋಳಂಗಿರ್ ಪಟ್ಟಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೊಲೆಯ ನಂತರ ಸಾಕ್ಷ್ಯ ನಾಶಪಡಿಸುವ ಪ್ರಯತ್ನದಲ್ಲಿ ಹಂತಕ ವಿಫಲನಾಗಿದ್ದಾನೆ ಎಂದು ಶಂಕಿಸಲಾಗಿದೆ. ಇದರಲ್ಲಿ ಕುಟುಂಬ ಸದಸ್ಯರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ವೈಜ್ಞಾನಿಕ ತಂಡ ಆಗಮಿಸಿದ್ದು, ಘಟನೆ ಕುರಿತು ತನಿಖೆ ನಡೆಸುತ್ತಿದೆ.
ಬೋಲಂಗಿರ್ ಉಪವಿಭಾಗೀಯ ಪೊಲೀಸ್ ಅಧಿಕಾರಿ (SDPO), ತೋಫನ್ ಬಾಗ್ ಈ ಬಗ್ಗೆ ಮಾಹಿತಿ ನೀಡಿದ್ದು, ಇದು ಯೋಜಿತ ಕೊಲೆಯಾಗಿದೆ. ಆದರೆ, ಕೊಲೆಯ ಹಿಂದಿನ ಉದ್ದೇಶ ಇನ್ನೂ ಪತ್ತೆಯಾಗಿಲ್ಲ. ಸ್ಥಳೀಯ ಜನರಿಂದ ಮಾಹಿತಿ ಪಡೆದ ನಂತರ, ನಾವು ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಬಾಗಿಲು ಒಡೆದು ನೋಡಿದಾಗ ಕತ್ತರಿಸಿದ ದೇಹದ ಭಾಗಗಳು ಪತ್ತೆಯಾಗಿವೆ. ಡಿಎಫ್‌ಎಸ್‌ಎಲ್ ತಂಡ ತಕ್ಷಣ ಘಟನಾ ಸ್ಥಳಕ್ಕೆ ತಲುಪಿದ್ದು, ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ. ಕೊಲೆಗಾರ ದೇಹದ ಭಾಗಗಳನ್ನು ವಿಲೇವಾರಿ ಮಾಡುವ ಉದ್ದೇಶದಿಂದ ಪಾಲಿಥಿನ್ ಚೀಲಗಳಲ್ಲಿ ಪ್ಯಾಕ್ ಮಾಡಿರಬಹುದು. ಕಾರಣಾಂತರಗಳಿಂದ ಕೊಲೆಗಾರನಿಗೆ ಅದನ್ನು ಮಾಡಲು ಸಾಧ್ಯವಾಗಿಲ್ಲ ಎಂದು ಶಂಕಿಸಲಾಗಿದೆ ಎಂದು ಹೇಳಿದರು.
ಇದೇ ವೇಳೆ ಮೃತ ರಿಂಕು ಮೆಹರ್ ಸಂಬಂಧಿಕರು ಇದೊಂದು ಸ್ಪಷ್ಟ ಕೊಲೆ ಪ್ರಕರಣವಾಗಿದ್ದು, ಯೋಜಿತ ರೀತಿಯಲ್ಲಿ ರಿಂಕು ಅವರನ್ನು ಹರಿತವಾದ ಆಯುಧದಿಂದ ಕತ್ತರಿಸಿರುವಂತೆ ತೋರುತ್ತಿದೆ. ತಪ್ಪಿತಸ್ಥರನ್ನು ಬಂಧಿಸಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಅಮೆರಿಕದ ಒಕ್ಲಹೋಮ್ನಲ್ಲಿ ಭಾರತೀಯ ಸಂಜಾತೆ ನಿಗೂಢ ಸಾವು: ತನಿಖೆ ಚುರುಕು