ಮುಂಬೈ, ಮಹಾರಾಷ್ಟ್ರ : ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಂಬೀರ್ ಸಿಂಗ್ (Parambir Singh) ವಿರುದ್ಧ ದಾಖಲಾಗಿರುವ ಗೋರೆಗಾಂವ್ ಸುಲಿಗೆ (Goregaon ransom case) ಪ್ರಕರಣದ ತನಿಖೆ ನಡೆಸುತ್ತಿರುವ ಮಹಾರಾಷ್ಟ್ರ ಕ್ರೈಮ್ ಬ್ರಾಂಚ್ ಪರಂಬೀರ್ ಸಿಂಗ್ ತಲೆಮರೆಸಿಕೊಂಡಿದ್ದಾನೆ ಎಂದು ಘೋಷಿಸುವಂತೆ ಕೋರಿ ಇಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.
ಕ್ರೈಮ್ ಬ್ರಾಂಚ್ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಶೇಖರ್ ಜಗತಾಪ್ ಅವರು ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ (Chief Metropolitan Magistrate's Court) ಅರ್ಜಿ ಸಲ್ಲಿಸಿದ್ದಾರೆ. ಪರಂಬೀರ್ ಸಿಂಗ್ ಜೊತೆಗೆ ರಿಯಾಜ್ ಭಾಟಿ ಮತ್ತು ವಿನಯ್ ಸಿಂಗ್ ಅಲಿಯಾಸ್ ಬಬ್ಲು ತಲೆಮರೆಸಿಕೊಂಡಿದ್ದಾರೆ ಎಂದು ಘೋಷಿಸಲು ಅರ್ಜಿಯನ್ನು ಸಲ್ಲಿಸಲಾಗಿದೆ.
ಆರೋಪಿಗಳ ವಿರುದ್ಧ ಈಗಾಗಲೇ ಮೂರು ಜಾಮೀನು ರಹಿತ ವಾರಂಟ್ ಜಾರಿ ಮಾಡಲಾಗಿದೆ. ಆರೋಪಿಗಳನ್ನು ತಲೆಮರೆಸಿಕೊಂಡಿದ್ದಾರೆ ಎಂದು ಘೋಷಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೇವೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಶೇಖರ್ ಜಗತಾಪ್ ತಿಳಿಸಿದ್ದಾರೆ. ಈ ಅರ್ಜಿಯ ಕುರಿತು ನ್ಯಾಯಾಲಯ ಸೋಮವಾರ ತೀರ್ಪು ನೀಡಲಿದೆ.
ಅಕ್ಟೋಬರ್ 30ರಂದು ಇದೇ ನ್ಯಾಯಾಲಯ ಪರಂಬೀರ್ ಸಿಂಗ್ ವಿರುದ್ಧ ಮೂರನೇ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದರೂ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಅಪರಾಧ ವಿಭಾಗದ ಪೊಲೀಸರು ಅರ್ಜಿ ಸಲ್ಲಿಸಿದ್ದಾರೆ.
ಪರಂಬೀರ್ ಸಿಂಗ್ ಮತ್ತು ಇತರ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 384, 385, 388, 389, 120ಬಿ ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೂವರು ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ. ಆದರೂ ಅವರು ಪತ್ತೆಯಾಗಿರಲಿಲ್ಲ.
ಇದನ್ನೂ ಓದಿ: Cryptocurrency ಕುರಿತು ಪ್ರಧಾನಿ ಮೋದಿ ಸಭೆ: ಟೆರರ್ ಫಂಡಿಂಗ್ ಕುರಿತು ಆತಂಕ