ನಾಗಪುರ (ಮಹಾರಾಷ್ಟ್ರ): ‘ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ’ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸುವಂತೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಗಡಿ ವಿವಾದದ ಕುರಿತು ರಾಜ್ಯ ವಿಧಾನಸಭೆಯಲ್ಲಿ ಮಾತನಾಡುವ ವೇಳೆ ಠಾಕ್ರೆ ಈ ಮಾತು ಹೇಳಿದ್ದಾರೆ.
ಇದು ಕೇವಲ ಭಾಷೆ ಮತ್ತು ಗಡಿಯ ವಿಚಾರವಲ್ಲ. ಇದು ಮಾನವೀಯತೆಯ ವಿಚಾರ. ಮರಾಠಿ ಮಾತನಾಡುವ ಜನರು ಗಡಿ ಗ್ರಾಮಗಳಲ್ಲಿ ತಲೆತಲಾಂತರಗಳಿಂದ ವಾಸಿಸುತ್ತಿದ್ದಾರೆ. ಅವರ ದಿನನಿತ್ಯದ ಭಾಷೆ ಮತ್ತು ಜೀವನಶೈಲಿ ಎಲ್ಲ ಮರಾಠಿಯಾಗಿದೆ. ಗಡಿ ವಿವಾದವು ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇದ್ದು, ಕರ್ನಾಟಕ ಆಕ್ರಮಿತ ಮಹಾರಾಷ್ಟ್ರವನ್ನು ಕೇಂದ್ರ ಸರ್ಕಾರವು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಬೇಕು ಎಂದು ಹೇಳಿದರು.
ಏಕನಾಥ್ ಶಿಂದೆ ಈ ಬಗ್ಗೆ ಮಾತನಾಡಿದ್ದಾರಾ?: ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರು ಈ ವಿಷಯದ ಬಗ್ಗೆ ಏನಾದರೂ ಮಾತನಾಡಿದ್ದಾರೆಯೇ, ಅಥವಾ ಕರ್ನಾಟಕ ಸರ್ಕಾರದ ನಡೆಯನ್ನು ಪ್ರಶ್ನಿಸಿದ್ದಾರೆಯೇ ಎಂದು ಅವರು ಕೇಳಿದರು. ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿದೆ. ಅಲ್ಲಿಯ ತನಕ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಹೇಳಲಾಗಿದೆ. ಆದರೂ ಗಡಿಯಲ್ಲಿನ ವಾತಾವರಣವನ್ನು ಹಾಳು ಮಾಡುತ್ತಿರುವವರು ಯಾರು ಎಂದು ಕರ್ನಾಟಕ ಸರ್ಕಾರವನ್ನು ಗುರಿಯಾಗಿಸಿ ಉದ್ಧವ್ ಪ್ರಶ್ನೆ ಮಾಡಿದರು.
ಕರ್ನಾಟಕ ಸರ್ಕಾರ, ಗಡಿ ಸಮಸ್ಯೆ ಇತ್ಯರ್ಥವಾಗಿದ್ದು, ನೆರೆ ರಾಜ್ಯಕ್ಕೆ ಒಂದಿಂಚು ಭೂಮಿಯನ್ನೂ ನೀಡುವುದಿಲ್ಲ ಎಂದು ಹೇಳಿದೆ. ಈ ಬಗ್ಗೆ ಕೇಂದ್ರದ ನಡೆಯನ್ನು ಠಾಕ್ರೆ ಪ್ರಶ್ನಿಸಿದರು. ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯನ್ನು ನಾವು ಬಯಸುತ್ತೇವೆ. ಎರಡೂ ಸದನಗಳ ಸದಸ್ಯರು "ಕೇಸ್ ಫಾರ್ ಜಸ್ಟೀಸ್" ಚಲನಚಿತ್ರವನ್ನು ವೀಕ್ಷಿಸಬೇಕು. ಜೊತೆಗೆ ಮಹಾಜನ್ ಆಯೋಗದ ವರದಿಯನ್ನು ಓದಬೇಕು ಎಂದು ಠಾಕ್ರೆ ಹೇಳಿದರು.
ಬೆಳಗಾವಿ ಮುನ್ಸಿಪಲ್ ಕಾರ್ಪೊರೇಷನ್ ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸುವ ನಿರ್ಣಯವನ್ನು ಅಂಗೀಕರಿಸಿದಾಗ, ಕಾರ್ಪೊರೇಷನ್ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಅದೇ ರೀತಿ ಮಹಾರಾಷ್ಟ್ರದ ಕೆಲವು ಗ್ರಾಮ ಪಂಚಾಯಿತಿಗಳು ತೆಲಂಗಾಣದೊಂದಿಗೆ ವಿಲೀನಕ್ಕೆ ಒತ್ತಾಯಿಸಿದ್ದು, ಈ ಗ್ರಾಮ ಪಂಚಾಯತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಶಿಂದೆ ಸರ್ಕಾರಕ್ಕೆ ಧೈರ್ಯವಿಲ್ಲವೇ ಎಂದು ಅವರು ಪ್ರಶ್ನಿಸಿದರು.
ಇದನ್ನೂ ಓದಿ: ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಚರ್ಚೆಗೆ ನಿಯಮ 68 ರ ಅಡಿ ಅವಕಾಶ: ಸಭಾಪತಿ