ಮುಂಬೈ: ಕೋವಿಡ್ -19 ನಿರ್ಬಂಧಗಳಿಂದ ಪ್ರಭಾವಿತವಾದ ವಿವಿಧ ಕ್ಷೇತ್ರಗಳ ಜನರಿಗೆ 5,476 ಕೋಟಿ ರೂ. ಹಣಕಾಸು ಪ್ಯಾಕೇಜ್ ಘೋಷಿಸಿದ ಒಂದು ದಿನದ ನಂತರ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಕೋವಿಡ್ ಸಾಂಕ್ರಾಮಿಕ ರೋಗ ಪೀಡಿತರಿಗೆ ನೈಸರ್ಗಿಕ ವಿಪತ್ತು ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (ಎಸ್‌ಡಿಆರ್‌ಎಫ್) ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಭೂಕಂಪ, ಭಾರಿ ಮಳೆ ಮತ್ತು ಪ್ರವಾಹ ಸಂಭವಿಸಿದಾಗ ನೈಸರ್ಗಿಕ ವಿಪತ್ತು ಎಂದು ಘೋಷಿಸಲಾಗುತ್ತದೆ. ಅದರಿಂದ ತೊಂದರೆಗೊಳಗಾದ ಜನರಿಗೆ ವೈಯಕ್ತಿಕ ಪ್ರಯೋಜನಗಳನ್ನು ನೀಡಲಾಗುತ್ತದೆ. ನಾವೆಲ್ಲರೂ ಇದನ್ನು (ಸಾಂಕ್ರಾಮಿಕ) ನೈಸರ್ಗಿಕ ವಿಪತ್ತು ಎಂದು ಒಪ್ಪಿಕೊಂಡಿದ್ದೇವೆ. ಆದ್ದರಿಂದ, ಸಾಂಕ್ರಾಮಿಕ ರೋಗದಿಂದ ಜೀವನೋಪಾಯಕ್ಕೆ ಧಕ್ಕೆಯಾದ ಜನರಿಗೆ ನೈಸರ್ಗಿಕ ವಿಪತ್ತುಗಳಲ್ಲಿ ನೀಡಲಾಗುವ ವೈಯಕ್ತಿಕ ಪ್ರಯೋಜನಗಳನ್ನು ನೀಡುವಂತೆ ನಾವು ಪ್ರಧಾನಮಂತ್ರಿಯನ್ನು ಕೋರುತ್ತಿದ್ದೇವೆ ಎಂದರು.
ಇದನ್ನೂ ಓದಿ: ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಕೋವಿಡ್ ಸೋಂಕಿಗೆ ಬಲಿ!
ಸರ್ಕಾರದ ಮುಖ್ಯ ಕಾರ್ಯದರ್ಶಿ ಸೀತಾರಾಮ್ ಕುಂಟೆ ಈ ಬಗ್ಗೆ ಪ್ರಸ್ತಾಪಿಸಿ, ಸಾಂಕ್ರಾಮಿಕವು ವಿಪತ್ತು ಆದರೂ, ಇದನ್ನು ಇನ್ನೂ ನೈಸರ್ಗಿಕ ವಿಪತ್ತು ಎಂದು ವ್ಯಾಖ್ಯಾನಿಸಬೇಕಾಗಿಲ್ಲ. ಆದ್ದರಿಂದ, ಅಸ್ತಿತ್ವದಲ್ಲಿ ಇರುವ ವ್ಯವಸ್ಥೆಯ ಪ್ರಕಾರ ವೈಯಕ್ತಿಕ ಪ್ರಯೋಜನಗಳನ್ನು ನೀಡಲಾಗುವುದಿಲ್ಲ. ಸಾಂಕ್ರಾಮಿಕ ರೋಗವನ್ನು ನೈಸರ್ಗಿಕ ವಿಪತ್ತು ಎಂದು ಪರಿಗಣಿಸುವುದು ರಾಷ್ಟ್ರಮಟ್ಟದಲ್ಲಿ ತೆಗೆದುಕೊಳ್ಳಬೇಕಾದ ನಿರ್ಧಾರವಾಗಿದೆ. ಕೇಂದ್ರವು ಇದರ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದರು.
ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿಯಲ್ಲಿ ರಚಿಸಲಾದ ಎಸ್‌ಡಿಆರ್‌ಎಫ್, ಅಧಿಸೂಚಿತ ವಿಪತ್ತುಗಳಿಗೆ ಸ್ಪಂದಿಸುವಾಗ ರಾಜ್ಯ ಸರ್ಕಾರಗಳಿಗೆ ಲಭ್ಯವಿರುವ ಪ್ರಾಥಮಿಕ ನಿಧಿಯಾಗಿದೆ. ಎಸ್‌ಡಿಆರ್‌ಎಫ್ ಹಂಚಿಕೆಗೆ ಕೇಂದ್ರ ಸರ್ಕಾರ ಶೇ 75ರಷ್ಟು ಕೊಡುಗೆ ನೀಡಿದರೆ, ಉಳಿದ ಶೇ 25ರಷ್ಟು ಮಹಾರಾಷ್ಟ್ರದ ಕೊಡುಗೆಯಾಗಿದೆ. ಎಸ್‌ಡಿಆರ್‌ಎಫ್ ಸುಮಾರು 4,200 ಕೋಟಿ ರೂ.ಯಷ್ಟಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.