ಮುಂಬೈ: ವಿಕೇಂದ್ರೀಕೃತ ಉತ್ಪಾದನೆಯು ಭಾರತದಲ್ಲಿ ಉದ್ಯೋಗ ಸೃಷ್ಟಿಸುವುದರ ಜತೆಗೆ ಆರ್ಥಿಕಾಭಿವೃದ್ಧಿಗೆ ಸಹಾಯ ಮಾಡುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.
75 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮುಂಬೈನ ಶಾಲೆಯೊಂದರಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಮಾತನಾಡಿದರು. ನಾವು ಚೀನಾದ ವಸ್ತುಗಳನ್ನು ಸುಲಭವಾಗಿ ಬಹಿಷ್ಕರಿಸಬಹುದು. ಆದರೆ, ನಾವು ತಂತ್ರಜ್ಞಾನದಲ್ಲಿ ಹಿಂದುಳಿದಿದ್ದು, ಆ ದೇಶದ ಮೇಲೆ ಹೆಚ್ಚು ಅವಲಂಬಿತವಾಗಿದ್ದೇವೆ. ಹಾಗಾಗಿ ನಾವು ಅವರ ಮುಂದೆ ತಲೆ ಬಾಗಬೇಕಾಗುತ್ತದೆ. ಅವರ ಮುಂದೆ ನಾವು ಕೈ ಚಾಚಬಾರದು ಎಂದರೆ ಸ್ವಾವಲಂಬಿಗಳಾಗಬೇಕು. ಸ್ವಾವಲಂಬನೆಯಿಂದಾಗಿ ಉದ್ಯೋಗ ಸೃಷ್ಟಿಯಾಗುತ್ತವೆ ಎಂದರು.
ಇದನ್ನೂ ಓದಿ: ಬೀದಿಯಿಂದ ಕೆಲಸದ ಸ್ಥಳದವರೆಗೂ ಮಹಿಳೆಯರಿಗೆ ಗೌರವ, ಸುರಕ್ಷತೆ ಸಿಗಬೇಕು: ಪ್ರಧಾನಿ ಮೋದಿ
ಸ್ವದೇಶಿ ಎಂದರೆ ಇತರೆ ರಾಷ್ಟ್ರಗಳ ವಸ್ತುಗಳೆಲ್ಲವನ್ನೂ ತಿರಸ್ಕರಿಸುವುದಲ್ಲ. ಬದಲಿಗೆ ನಮ್ಮ ದೇಶದ ನಿಯಮಗಳು ಮತ್ತು ಷರತ್ತುಗಳ ಮೇಲೆ ಜಾಗತಿಕವಾಗಿ ವ್ಯವಹಾರ ನಡೆಸುವುದಾಗಿದೆ. ಸ್ವದೇಶಿ ಎಂದರೆ ಸ್ವಾವಲಂಬನೆ ಮತ್ತು ಅಹಿಂಸೆ ಎಂದು ಭಾಗವತ್ ಹೇಳಿದರು.