ಹಾರ್ದೋಯಿ: ಒಂದೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನ್ಯಾಯಾಲಯ ಆರೋಪಿಗೆ ಮರಣ ದಂಡನೆ ಶಿಕ್ಷೆ ನೀಡಿದೆ.
60 ವರ್ಷದ ಆರೋಪಿ ಗುಡ್ಡು ಅಲಿಯಾಸ್ ಗಬ್ಬು ಸುಮಾರು 7 ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಒಂದೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿ ಶವವನ್ನು ಕೊಳಕ್ಕೆ ಎಸೆದಿದ್ದ. ಈ ಘಟನೆ ಬಗ್ಗೆ 2014ರಲ್ಲಿ ಗಬ್ಬು ವಿರುದ್ಧ ಮಗುವಿನ ಪೋಷಕರು ದೂರು ದಾಖಲಿಸಿದ್ದರು.
ಮಗುವಿನ ದೇಹವನ್ನು ಕೊಳದಿಂದ ವಶಪಡಿಸಿಕೊಂಡ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಮಗುವನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂಬ ವರದಿ ಬಂದಿತ್ತು. ಈ ಪ್ರಕರಣ ಸತತ ಏಳು ವರ್ಷಗಳು ನ್ಯಾಯಾದಲ್ಲಿತ್ತು. ವಾದ ವಿವಾದ ಪೂರ್ಣಗೊಂಡ ನಂತರ ಆರೋಪಿಗೆ ಪೋಕ್ಸೊ ನ್ಯಾಯಾಲಯದ ಮೇಲ್ ಜಿಲ್ಲಾ ನ್ಯಾಯಾಧೀಶ ಚಂದ್ರ ವಿಜಯ್ ಶ್ರೀನೆಟ್ 1 ಲಕ್ಷ ರೂ. ದಂಡ ಮತ್ತು ಮರಣ ದಂಡನೆ ಶಿಕ್ಷೆ ನೀಡಿ ಮಹತ್ವ ತೀರ್ಪು ಪ್ರಕಟಿಸಿದರು.
ಅತ್ಯಾಚಾರದ ಅಪರಾಧಿಗೆ ನೀಡಲಾದ ಮರಣದಂಡನೆ ಕುರಿತು ನ್ಯಾಯಾಲಯದ ತೀರ್ಪಿನ ಬಗ್ಗೆ ಮಗುವಿನ ತಂದೆ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಾಸಿಕ್ಯೂಷನ್ ಈ ಪ್ರಕರಣವನ್ನು ಮಿಷನ್ ನಾರಿ ಶಕ್ತಿಯ ಅಡಿಯಲ್ಲಿ ವಿಚಾರಣೆಗೆ ಕೈಗೆತ್ತಿಕೊಂಡಿತ್ತು.