ನವದೆಹಲಿ: ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ತಮ್ಮ ಜೀವನದಲ್ಲಿ ಅನುಭವಿಸಿದ ಆಘಾತಕಾರಿ ಘಟನೆಯನ್ನು ಬಹಿರಂಗ ಪಡಿಸಿದ್ದಾರೆ. ಬಾಲ್ಯದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ. ನನ್ನ ತಂದೆಯೇ ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ತಾಯಿ, ಅತ್ತೆ ಮತ್ತು ಅಜ್ಜಿಯಿಂದಾಗಿ ನನಗೆ ಈ ನೋವಿನಿಂದ ಹೊರಬರಲು ಸಾಧ್ಯವಾಯಿತು ಎಂದು ಸ್ವಾತಿ ಮಲಿವಾಲ್ ತಿಳಿಸಿದ್ದಾರೆ.
ದೆಹಲಿ ಮಹಿಳಾ ಆಯೋಗವು ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ನಲ್ಲಿ ಶನಿವಾರ ಆಯೋಜಿಸಿದ್ದ ಬಹುಮಾನ ವಿತರಣಾ ಸಮಾರಂಭವನ್ನು ಉದ್ದೇಶಿಸಿ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಮಾತನಾಡಿದರು. ತಂದೆಯ ಶೋಷಣೆಯಿಂದ ನೊಂದಿರುವ ನಾನು, ಇದರಿಂದ ಹೊರಬರುವುದು ಹೇಗೆ ಎಂದು ಸದಾ ಯೋಚಿಸುತ್ತಿದ್ದೆ. ಇಂತಹ ಸಂಕಷ್ಟದ ಸಮಯದಲ್ಲಿ ಅಜ್ಜಿ, ತಾಯಿ, ಅತ್ತೆ ನನ್ನನ್ನು ಪಾರು ಮಾಡಿದರು ಎಂದು ತಿಳಿಸಿದರು.
ನನ್ನ ತಂದೆ ನನಗೆ ಆಗ್ಗಾಗ್ಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಅವರು ಮನೆಗೆ ಬಂದಾಗಲೆಲ್ಲ ನನಗೆ ಭಯವಾಗುತ್ತಿತ್ತು. ನನಗೆ ಇನ್ನೂ ನೆನಪಿದೆ.. ನಾನು ಇದೇ ಭಯದಲ್ಲಿ ಅನೇಕ ರಾತ್ರಿಗಳನ್ನು ನಿದ್ರೆಯಿಲ್ಲದೇ ಕಳೆದಿದ್ದೇನೆ. ಆ ದಿನಗಳನ್ನು ಎಂದಿಗೂ ಮರೆಯುವುದಿಲ್ಲ. ತಂದೆ ನನಗೆ ಯಾವುದೇ ಕಾರಣವಿಲ್ಲದೆ ಥಳಿಸುತ್ತಿದ್ದರು. ಒಮ್ಮೆ ಅಂತೂ ನನ್ನ ಕೂದಲನ್ನು ಹಿಡಿದು ಗೋಡೆಗೆ ಎಸೆದು, ಹೊಡೆದಿದ್ದರು ಎಂದು ವಿವರಿಸಿದರು.
ಭಯ ಪಡದೇ ಧ್ವನಿ ಎತ್ತಬೇಕು: ಮಹಿಳೆಯರು ತಮ್ಮ ಮೇಲೆ ನಡೆಯುವ ಯಾವುದೇ ದೌರ್ಜನ್ಯ ಅಥವಾ ಯಾವುದೇ ರೀತಿಯ ಶೋಷಣೆಯನ್ನು ಸಹಿಸಬಾರದು. ಹೊರಗಿನವರು ಅಥವಾ ಮನೆಯವರೇ ಆಗಿರಲಿ ಶೋಷಣೆಯನ್ನು ಮಾಡಿದಾಗ ಇದರ ವಿರುದ್ಧ ಧ್ವನಿ ಎತ್ತಬೇಕೆಂದು ಸ್ವಾತಿ ಮಲಿವಾಲ್ ಹೇಳಿದರು.
ಮಹಿಳೆಯರು ತಮ್ಮ ಮರ್ಯಾದೆಯ ಬಗ್ಗೆ ಕಾಳಜಿ ವಹಿಸಬೇಕು. ಅದಕ್ಕಾಗಿಯೇ ದನಿಯೆತ್ತಿ ಪ್ರತಿಯೊಂದು ಶೋಷಣೆಯನ್ನು ಪ್ರಪಂಚದ ಮುಂದೆ ತರಬೇಕು. ಭಯಪಡುವಂಥದ್ದೇನೂ ಇಲ್ಲ. ಯಾವುದೇ ಮಹಿಳೆಗೆ ಏನಾದರೂ ಅನಾಹುತ ಸಂಭವಿಸಿದಲ್ಲಿ ಆಕೆಗೆ ನ್ಯಾಯ ದೊರಕಿಸಿಕೊಡುವುದರೊಂದಿಗೆ ಸಾಧ್ಯವಿರುವ ಎಲ್ಲ ನೆರವು ಒದಗಿಸಬೇಕು ಎಂಬುದೇ ದೆಹಲಿ ಮಹಿಳಾ ಆಯೋಗದ ಧ್ಯೇಯವಾಗಿದೆ ಎಂದರು.
ಇದೇ ವೇಳೆ ಹೋಳಿ ಹಬ್ಬದಂದು ಜಪಾನ್ ಯುವತಿಯೊಂದಿಗೆ ಕೆಲ ಯುವಕರು ಅನುಚಿತವಾಗಿ ನಡೆದುಕೊಂಡ ಘಟನೆಯ ಬಗ್ಗೆಯೂ ಸ್ವಾತಿ ಪ್ರತಿಕ್ರಿಯಿಸಿದರು. ನಾನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಜಪಾನ್ ಯುವತಿಯ ವಿಡಿಯೋವನ್ನು ಗಮನಿಸಿದ್ದೇನೆ. ಯುವತಿಗೆ ಸಾಕಷ್ಟು ಕಿರುಕುಳ ನೀಡಲಾಗಿದೆ. ಈ ಕುರಿತು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡುತ್ತಿದ್ದೇವೆ. ಕೂಡಲೇ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಜೈಲಿಗೆ ಹಾಕಬೇಕೆಂದು ಒತ್ತಾಯಿಸಿದರು.
ಮತ್ತೊಂದೆಡೆ, ಬಣ್ಣ ಹಚ್ಚುವ ನೆಪದಲ್ಲಿ ಜಪಾನ್ ಯುವತಿಗೆ ಯುವಕರ ಗುಂಪೊಂದು ಕಿರುಕುಳ ನೀಡಿದ ಘಟನೆಗೆ ಸಂಬಂಧ ವಿಡಿಯೋ ವೈರಲ್ ಆದ ನಂತರ ಆರೋಪಿಗಳ ಪತ್ತೆಗೆ ದೆಹಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ತೃಣಮೂಲ ಕಾಂಗ್ರೆಸ್ ಬೂತ್ ಸಮ್ಮೇಳನದಲ್ಲಿ ಅಶ್ಲೀಲ ನೃತ್ಯ : ವಿಡಿಯೋ ವೈರಲ್