ಗೊಂಡಾ (ಉತ್ತರ ಪ್ರದೇಶ): ಮದುವೆ ಕಾರ್ಯಕ್ರಮದಲ್ಲಿ ಊಟದ ವೇಳೆ ಆಹಾರವನ್ನು ಮುಟ್ಟಿದ್ದಕ್ಕಾಗಿ ದಲಿತ ಯುವಕನನ್ನು ನಿಂದಿಸಿ ಅಮಾನುಷವಾಗಿ ಥಳಿಸಿದ ಆಘಾತಕಾರಿ ಘಟನೆ ಉತ್ತರಪ್ರದೇಶದ ವಾಜೀರ್ಗಂಜ್ನಲ್ಲಿ ಬೆಳಕಿಗೆ ಬಂದಿದೆ. ಎಸ್ಸಿ, ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಲಲ್ಲಾ ಹಲ್ಲೆಗೊಳಗಾದ ದಲಿತ ಯುವಕ. ತನ್ನ ಸಹೋದರನ ಜೊತೆಗೆ ಪರಿಚಯದ ಮನೆಯಲ್ಲಿ ನಡೆಯುತ್ತಿದ್ದ ವಿವಾಹದಲ್ಲಿ ಭಾಗಿಯಾಗಿದ್ದರು. ಔತಣಕೂಟದ ವೇಳೆ ಲಲ್ಲಾ ತಟ್ಟೆಯನ್ನು ತೆಗೆದುಕೊಂಡು ಊಟ ಬಡಿಸಿಕೊಂಡಾಗ ಅಲ್ಲಿದ್ದವರು ಇದನ್ನು ವಿರೋಧಿಸಿದ್ದಾರೆ. ಬಳಿಕ ಲಲ್ಲಾನನ್ನು ನಿಂದಿಸಿ, ಹಲ್ಲೆ ಮಾಡಿದ್ದಾರೆ. ತಡೆಯಲು ಬಂದ ಸಹೋದರನನ್ನೂ ಥಳಿಸಿದ್ದಾರೆ.
ಅವಮಾನಿತನಾದ ಯುವಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಇದನ್ನು ತಿಳಿದ ಮದುವೆ ಮನೆಯವರು ಲಲ್ಲಾನ ಮನೆಗೆ ಬಂದು ಮತ್ತೆ ಹಲ್ಲೆ ಮಾಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.