ಹರ್ದಾ(ಮಧ್ಯಪ್ರದೇಶ): ಸರ್ಕಾರಗಳು ಸಮಾಜದಲ್ಲಿ ಸಾಮರಸ್ಯ ತರಲು ಎಷ್ಟೋ ರೀತಿಯ ಪ್ರಯತ್ನಗಳನ್ನು ಮಾಡುತ್ತಿವೆ. ಆದರೆ, ಬಹುಪಾಲು ಪ್ರಯತ್ನಗಳು ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಮೇಲ್ಜಾತಿ, ಕೆಳ ಜಾತಿಗಳೆಂಬ ಗೋಡೆಗಳು ಬಲಿಷ್ಠವಾಗುತ್ತಲೇ ಇವೆ.
ಮಧ್ಯಪ್ರದೇಶದ ಹರ್ದಾ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ತನಗಾಗುತ್ತಿರುವ ಅವಮಾನದ ಕುರಿತು ದೂರನ್ನು ನೀಡಿದ್ದಾಳೆ. ಸಾರ್ವಜನಿಕ ನಲ್ಲಿಯಲ್ಲಿ ಆಕೆಗೆ ನೀರು ಹಿಡಿಯಲು ಕೆಲವರು ಅವಕಾಶ ನೀಡುತ್ತಿಲ್ಲ ಎಂದು ದಲಿತ ಮಹಿಳೆಯೊಬ್ಬರು ದೂರು ನೀಡಿದ್ದಾರೆ.
ಅಚ್ಚರಿಯಾದರೂ ನಿಜ.. ನಾಲ್ಕು ವರ್ಷದ ಹಿಂದೆ ಮೇಲ್ಜಾತಿಯ ಯುವಕನನ್ನು ಆಕೆ ಪ್ರೀತಿಸಿ ಮದುವೆಯಾಗಿದ್ದು, ಒಬ್ಬ ಮಗಳೂ ಇದ್ದಾರೆ. ಮೇಲ್ಜಾತಿಯ ಯುವಕನನ್ನು ಪ್ರೀತಿಸಿ ವಿವಾಹವಾಗಿರುವ ಕಾರಣಕ್ಕೆ ಕೆಲವು ಮೇಲ್ಜಾತಿಯ ಜನರು ತನಗೆ ಕಿರುಕುಳ ನೀಡುತ್ತಿದ್ದಾರೆ. ಸಾರ್ವಜನಿಕ ನಲ್ಲಿಯಿಂದ ನೀರು ಹಿಡಿಯಲು ಬಿಡುತ್ತಿಲ್ಲ. ಜಾತಿಯ ಬಗ್ಗೆ ನಿಂದಿಸುತ್ತಿದ್ದಾರೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ.
ಇಷ್ಟಕ್ಕೆ ಆಕೆಯ ಸಮಸ್ಯೆಗಳು ಸೀಮಿತವಾಗಿಲ್ಲ. ದೇವಸ್ಥಾನಕ್ಕೆ ಹೋದಾಗ ಅಲ್ಲಿನ ಅರ್ಚಕರು ಒದ್ದಿದ್ದು, ಹೊರಗೆ ಕಳುಹಿಸಿದ್ದಾರೆ. ಸಮೀಪದ ದೇವಸ್ಥಾನಕ್ಕೂ ಪ್ರವೇಶಿಸದಂತೆ ತಡೆದಿದ್ದಾರೆ. ಆಕೆಯ ಪುಟ್ಟ ಮಗುವನ್ನೂ ಕೂಡಾ ಹಲವಾರು ಬಾರಿ ದೇವಸ್ಥಾನದ ಅರ್ಚಕ ನಿಂದಿಸಿ ಹೊರಹಾಕಿದ್ದಾರೆ.
ಒಮ್ಮೆ ಪುಟ್ಟ ಕಂದಮ್ಮನ ಮೇಲೆ ಅರ್ಚಕ ಹಲ್ಲೆ ನಡೆಸಿದ್ದು, ತುಟಿಯಲ್ಲಿ ರಕ್ತ ಬರುವಂತೆ ಹೊಡೆದಿದ್ದಾರೆ. ಪ್ರಸಾದವನ್ನು ದೇವಾಲಯದಿಂದ ಹೊರಗೆ ನಿಂತು ತೆಗೆದುಕೊಳ್ಳಬೇಕೆಂದು ಅರ್ಚಕರು ಕಿರುಕುಳ ನೀಡುತ್ತಾರೆ. ಶೌಚಾಲಯಕ್ಕೆ ತೆರಳುವ ವೇಳೆ ಕೆಲವರು ಕಲ್ಲುಗಳನ್ನು ಎಸೆಯುತ್ತಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ನನಗೆ ನ್ಯಾಯ ಸಿಗಬೇಕೆಂದು ಒಮ್ಮೆ ಎಸ್ಸಿ ಮತ್ತು ಎಸ್ಟಿಗಳಿಗಾಗಿ ಇರುವ ಅಜಾಕ್ ಪೊಲೀಸ್ಗೆ ದೂರು ನೀಡಿದ್ದೆ. ಮತ್ತೊಮ್ಮೆ ಜಿಲ್ಲಾ ಎಸ್ಪಿಗೆ ದೂರು ನೀಡಿದ್ದೆನು. ಆದರೆ ವಿಚಾರಣೆ ನಡೆದಿಲ್ಲ. ಮತ್ತೊಮ್ಮೆ ಅಜಾಕ್ ಪೊಲೀಸ್ ಠಾಣೆಗೆ ದೂರು ನೀಡಿದಾಗ ಠಾಣೆಯ ಉಸ್ತುವಾರಿ ಅನುರಾಗ್ ಲಾಲ್ ಸತ್ಯಾಂಶವನ್ನು ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ ಎಂದು ಸಂತ್ರಸ್ತ ಮಹಿಳೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಡ್ರಗ್ಸ್ ಕೇಸ್: ನೋಟಿಸ್ ನೀಡಿದರೂ ವಿಚಾರಣೆಗೆ ಶಂಕಿತರು ಗೈರು.. ರಾಜಕಾರಣಿ ಪುತ್ರ ಶಾಮೀಲು ಶಂಕೆ