ನವದೆಹಲಿ : ಭಾರತದಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ 24 ಗಂಟೆಗಳಲ್ಲಿ 140 ದಿನಗಳಲ್ಲೇ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗಿವೆ. ಒಟ್ಟು 1,300 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 7,605ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಕೊರೊನಾದಿಂದಾಗಿ ಒಟ್ಟು ಮೂವರು ಸಾವನ್ನಪ್ಪಿದ್ದು ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ನಲ್ಲಿ ತಲಾ ಒಂದೊಂದು ಸಾವು ಸಂಭವಿಸಿದೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 5,30,816ಕ್ಕೆ ಏರಿಕೆ ಆಗಿದೆ. ಒಟ್ಟು ಇದುವರೆಗೆ 4.46 ಕೋಟಿ (4,46,99,418) ಕೋವಿಡ್ ಪ್ರಕರಣಗಳು ದಾಖಲಾಗಿವೆ ಎಂದು ಸಚಿವಾಲಯ ಅಂಕಿಅಂಶ ಬಿಡುಗಡೆ ಮಾಡಿದೆ.
ದೈನಂದಿನ ಪಾಸಿಟಿವಿಟಿ ದರವು ಶೇ.1.46 ಇದ್ದು, ವಾರದ ಪಾಸಿಟಿವಿಟಿ ದರ ಶೇ.1.08 ದಾಖಲಾಗಿದೆ. ಒಟ್ಟು ಕೋವಿಡ್ ಪ್ರಕರಣದ ಶೇ 0.02 ಸಕ್ರಿಯ ಪ್ರಕರಣಗಳಿವೆ. ರಾಷ್ಟ್ರೀಯ ಕೋವಿಡ್ ಚೇತರಿಕೆ ದರವು ಶೇ. 98.79ರಷ್ಟಿದೆ.
ಕೋವಿಡ್ ಪ್ರಕರಣ ಪತ್ತೆಗಾಗಿ ಇದುವರೆಗೆ ಒಟ್ಟು 92.06 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದ್ದು, ಕಳೆದ 24 ಗಂಟೆಗಳಲ್ಲಿ 89,078 ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇನ್ನು,ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,41,60,997ಕ್ಕೆ ಏರಿಕೆಯಾಗಿದೆ. ಸಾವಿನ ಪ್ರಮಾಣ ಶೇ. 1.19 ರಷ್ಟಿದೆ. ಲಸಿಕೆ ಅಭಿಯಾನದ ಅಡಿಯಲ್ಲಿ ಇದುವರೆಗೆ ದೇಶದಲ್ಲಿ 220.65 ಕೋಟಿಯಷ್ಟು ಕೋವಿಡ್ ಲಸಿಕೆಗಳನ್ನು ಸಾರ್ವಜನಿಕರಿಗೆ ನೀಡಲಾಗಿದೆ ಎಂದು ಸಚಿವಾಲಯದ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ.
ಕೇರಳದಲ್ಲಿ ಕೋವಿಡ್ ಹೆಚ್ಚಳ: ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪ್ರತಿದಿನ ಸಾಮಾನ್ಯವಾಗಿ 200ರಷ್ಟು ಕೋವಿಡ್ ಪ್ರಕರಣಗಳು ಇಲ್ಲಿ ವರದಿಯಾಗುತ್ತಿವೆ. ಮಂಗಳವಾರ ಒಟ್ಟು 172 ಪ್ರಕರಣಗಳು ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯದಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ.
ಮಂಗಳವಾರದ ಅಂಕಿಅಂಶಗಳ ಪ್ರಕಾರ, ಕೇರಳದಲ್ಲಿ ಒಟ್ಟು 1,026 ಸಕ್ರಿಯ ಪ್ರಕರಣಗಳು ಮತ್ತು 111 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಸಂಬಂಧ ಎಲ್ಲಾ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸೂಚನೆ ನೀಡಿದ್ದಾರೆ. ಕೋವಿಡ್ ಹರಡುವಿಕೆ ತಡೆಯಲು ಎಲ್ಲಾ ಜಿಲ್ಲೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೋವಿಡ್ ತಡೆಗಟ್ಟಲು ಎಲ್ಲರೂ ಮಾಸ್ಕ್ ಧರಿಸಬೇಕು. ಕಾಯಿಲೆ ಇರುವವರು ವಿಶೇಷ ಕಾಳಜಿ ವಹಿಸಬೇಕು. ಸಾರ್ವಜನಿಕ ಸ್ಥಳಗಳಲ್ಲೂ ಮಾಸ್ಕ್ ಧರಿಸಬೇಕು. ಆಸ್ಪತ್ರೆಗೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಬರುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಕೇರಳ ಸೇರಿದಂತೆ ಇತರ ಆರು ರಾಜ್ಯಗಳಿಗೆ ಕೋವಿಡ್ ಹಿನ್ನೆಲೆಯಲ್ಲಿ ಕೆಲವು ನಿರ್ದೇಶನಗಳನ್ನು ನೀಡಿತ್ತು.
ಇದನ್ನೂ ಓದಿ : ಕೇರಳದಲ್ಲಿ ಕೋವಿಡ್ ಉಲ್ಬಣ, ಹೈ ಅಲರ್ಟ್.. ಕರ್ನಾಟಕಕ್ಕೆ ಎಚ್ಚರಿಕೆ ಗಂಟೆ