ನವದೆಹಲಿ: ಕೋವಿಡ್ ಸಂದಿಗ್ಧತೆಯ ನಡುವೆ ಕರ್ನಾಟಕ ಸೇರಿದಂತೆ ದೇಶದ ದಕ್ಷಿಣದ ಕೆಲವು ರಾಜ್ಯಗಳಿಗೆ ತೌಕ್ತೆ ಚಂಡಮಾರುತದ ಸವಾಲು ಎದುರಾಗಿದೆ.
ಈಗಾಗಲೇ ಅರಬ್ಬಿ ಸಮುದ್ರದಿಂದ ಕೇರಳ ಮೂಲಕ ಪ್ರವೇಶಿಸಿರುವ ಚಂಡಮಾರುತ ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರಗಳ ಕರಾವಳಿ ತೀರದಲ್ಲಿ ಅಬ್ಬರಿಸುತ್ತಿದೆ.
ಕೇರಳದ ಉಪ್ಪಳ, ಕಾಸರಗೋಡು, ಕರ್ನಾಟಕದ ಮಂಗಳೂರು, ಕುಂದಾಪುರ, ಸುರತ್ಕಲ್, ಕಾಪು, ಮರವಂತೆ ಪ್ರದೇಶಗಳಲ್ಲಿ ಸಮುದ್ರದಲೆಗಳು ರೌದ್ರವತಾರ ತಾಳಿವೆ. ಇಲ್ಲಿನ ಹಲವಾರು ಮನೆಗಳು ಸಾಗರ ಸೇರಿವೆ. ಗುರುವಾರದ ಹೊತ್ತಿಗೆ ತೌಕ್ತೆ ಗುಜರಾತ್ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ.
ಗಾಳಿ ಮಳೆಗೆ ತತ್ತರಿಸಿದ ಕರಾವಳಿ: ತೌಕ್ತೆ ಚಂಡಮಾರುತದ ಪರಿಣಾಮ ಕೇರಳದ ಕಾಸರಗೋಡು, ಕಣ್ಣೂರು, ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಗೋವಾದ ಹಲವು ಜಿಲ್ಲೆಗಳಲ್ಲಿ ಶನಿವಾರದಿಂದ ತೀವ್ರವಾದ ಗಾಳಿ ಮಳೆಯಾಗುತ್ತಿದೆ. ಮಹಾರಾಷ್ಟ್ರದಲ್ಲಿ ಭಾನುವಾರ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕ, ಕೇರಳದ ಸಮುದ್ರ ತೀರದ ಹಲವು ಮನೆಗಳು ಅಲೆಗಳ ಹೊಡೆತಕ್ಕೆ ನೀರು ಪಾಲಾಗಿವೆ. ಸಮುದ್ರ ತೀರದಲ್ಲಿ ಲಂಗರು ಹಾಕಿದ್ದ ಮೀನುಗಾರಿಕ ಬೋಟ್ಗಳಿಗೆ ಹಾನಿಯಾಗಿದೆ.
ಮೀನುಗಾರರು ನಾಪತ್ತೆ:
ಚಂಡಮಾರುತದ ಹೊಡೆತಕ್ಕೆ ಎರಡು ಬೋಟ್ಗಳು ಮಂಗಳೂರಿನ ಆಳ ಸಮುದ್ರದಲ್ಲಿ ಸಿಲುಕಿಹಾಕಿಕೊಂಡಿವೆ ಎನ್ನಲಾಗುತ್ತಿದೆ. ಒಂದು ಬೋಟ್ನಲ್ಲಿದ್ದ 5 ಮಂದಿ ನಾಪತ್ತೆಯಾಗಿದ್ದು 9 ಮಂದಿಯಿರುವ ಮತ್ತೊಂದು ಬೋಟ್ ಅಪಾಯಕ್ಕೆ ಸಿಲುಕಿದೆ ಎಂದು ತಿಳಿದು ಬಂದಿದೆ.
ನವಮಂಗಳೂರು ಬಂದರಿನಿಂದ ಹೊರಟಿದ್ದ ಎಂಆರ್ಪಿಎಲ್ಗೆ ಸಂಬಂಧಿಸಿದ ತೇಲು ಜೆಟ್ಟಿ ನಿರ್ವಹಣೆ ಮಾಡುವ ಬೋಟ್ ಚಂಡಮಾರುತಕ್ಕೆ ಸಿಲುಕಿದೆ. ಎರಡು ಬೋಟ್ಗಳು ಚಂಡಮಾರುತದ ಅಬ್ಬರಕ್ಕೆ ಸಿಲುಕಿದ್ದು ಇದರಲ್ಲಿ 17 ಮಂದಿ ಇದ್ದರು. ಒಂದು ಬೋಟ್ನಲ್ಲಿ 9 ಮತ್ತು ಇನ್ನೊಂದು ಬೋಟ್ನಲ್ಲಿ 8 ಮಂದಿ ಇದ್ದರು. ಇದರಲ್ಲಿ 8 ಮಂದಿ ಇದ್ದ ಬೋಟ್ನಲ್ಲಿದ್ದವರು ಸಮುದ್ರಕ್ಕೆ ಬಿದ್ದಿದ್ದು ಇಬ್ಬರು ಈಜಿಕೊಂಡು ಉಡುಪಿ ಜಿಲ್ಲೆಯ ಮಟ್ಟುವಿನಲ್ಲಿ ದಡ ಸೇರಿದ್ದಾರೆ. ಓರ್ವನ ಮೃತದೇಹ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ದೊರೆತಿದೆ. ಉಳಿದ 5 ಮಂದಿಯ ಶೋಧ ಕಾರ್ಯ ಮುಂದುವರಿದಿದೆ.
ಉರುಳಿ ಬಿದ್ದ ಮನೆ, ಮರ, ವಿದ್ಯುತ್ ಕಂಬ:
ಕೇರಳ, ಕರ್ನಾಟಕದಲ್ಲಿ ಗಾಳಿ, ಅಲೆಯ ಹೊಡೆತಕ್ಕೆ ಸಮುದ್ರ ತೀರದ ಹಲವು ಮನೆಗಳು ನೀರು ಪಾಲಾಗಿವೆ. ಇಲ್ಲಿನ ನಿವಾಸಿಗಳನ್ನು ಜಿಲ್ಲಾಡಳಿತಗಳು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ಕರ್ನಾಟಕದ ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಲವೆಡೆ ಮರ, ವಿದ್ಯುತ್ ಕಂಬಗಳು ಧರೆಗುರುಳಿವೆ.
ಗುಜರಾತ್ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ:
ಮುಂದಿನ 12 ಗಂಟೆಗಳಲ್ಲಿ ತೌಕ್ತೆಯ ಪ್ರಭಾವ ಇನ್ನಷ್ಟು ಹೆಚ್ಚಾಗಲಿದೆ. ಇದು ಉತ್ತರ- ವಾಯುವ್ಯ ದಿಕ್ಕಿನೆಡೆಗೆ ಬೀಸಿ, ಮೇ 18 ರಂದು ಗುಜರಾತ್‌ನ ಪೋರ ಬಂದರು ಮತ್ತು ನಲಿಯಾ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ ) ತಿಳಿಸಿದೆ.
ಸರ್ವ ಸನ್ನದ್ದವಾದ ಎನ್ಡಿಆರ್ಎಫ್ :
ತೌಕ್ತೆಯ ಹೊಡೆತಕ್ಕೆ ಸಿಲುಕಿರುವ ಕೇರಳ, ಕರ್ನಾಟಕ, ತಮಿಳುನಾಡು, ಗುಜರಾತ್, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಕರಾವಳಿಗಳಲ್ಲಿ ಸುಮಾರು 50 ರಷ್ಟು ಎನ್ಡಿಆರ್ಎಫ್ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಯಾವುದೇ ಪರಿಸ್ಥಿತಿ ಎದುರಾದರೂ ಎದುರಿಸಲು ಕೇಂದ್ರ ಮತ್ತು ಆಯಾ ರಾಜ್ಯ ಸರ್ಕಾರಗಳು ಸರ್ವ ಸನ್ನದ್ದವಾಗಿವೆ.
ರೈಲು ಸ್ಥಗಿತ :
ತೌಕ್ತೆ ಚಂಡಮಾರುತದ ಮುನ್ನೆಚ್ಚರಿಕೆ ಕ್ರಮವಾಗಿ ಗುಜರಾತ್‌ನ ಸೌರಾಷ್ಟ್ರದಿಂದ ಪ್ರಾರಂಭಗೊಳ್ಳುವ ಮತ್ತು ಕೊನೆಗೊಳ್ಳುವ 56 ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ ಎಂದು ಪಶ್ಚಿಮ ರೈಲ್ವೆ ತಿಳಿಸಿದೆ.
ಮೀನುಗಾರಿಗೆ ನಿರ್ಬಂಧ, ಬೀಚ್ ಬಂದ್ :
ತೌಕ್ತೆಯ ಅಬ್ಬರ ಕಡಿಮೆಯಾಗುವವರೆಗೆ ಮೀನುಗಾರಿಕೆಗೆ ತೆರಳದಂತೆ ಆಳ ಸಮುದ್ರ ಮೀನುಗಾರರಿಗೆ ಆಯಾ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಈಗಾಗಲೇ ಎಲ್ಲಾ ರಾಜ್ಯಗಳ ಬೀಚ್ಗಳನ್ನು ಬಂದ್ ಮಾಡಲಾಗಿದ್ದು, ಯಾರೂ ಸಮುದ್ರ ತೀರಕ್ಕೆ ತೆರಳದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಮಾಹಿತಿ ಪಡೆದ ಪ್ರಧಾನಿ:
ಚಂಡಮಾರುತ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸಚಿವಾಲಯಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ದೆಹಲಿಯಿಂದ ಮಾಹಿತಿ ಪಡೆದಿದ್ದಾರೆ. ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದು ಸೇರಿದಂತೆ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.