ನವದೆಹಲಿ: ಮೇ ವೇಳೆಗೆ ಐದು ರಾಜ್ಯಗಳ ಚುನಾವಣೆ ನಡೆಯಲಿದ್ದು, ಜೂನ್ನಲ್ಲಿ ಎಐಸಿಸಿಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದು ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.
ಇಂದು ನಡೆದ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹಿರಿಯ ನಾಯಕರಾದ ಗುಲಾಂ ನಬಿ ಅಜಾದ್, ಆನಂದ್ ಶರ್ಮಾ, ಮುಕುಲ್ ವಾಸ್ನಿಕ್ ಮತ್ತು ಪಿ.ಚಿದಂಬರಂ, ಶೀಘ್ರದಲ್ಲೇ ನಡೆಯಲಿರುವ ಚುನಾವಣೆಗಳ ಬಗ್ಗೆ ಧ್ವನಿ ಎತ್ತಿದರು ಎನ್ನಲಾಗಿದೆ. ಜತೆಗೆ ಚುನಾವಣೆಗಳ ಸರಣಿ ಸೋಲುಗಳ ನಂತರ ಪಕ್ಷದ ನಾಯಕತ್ವ ಮತ್ತು ನಿರ್ವಹಣೆಯ ಬಗ್ಗೆ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಂಗಾಳ, ತಮಿಳುನಾಡು ಸೇರಿ ಐದು ರಾಜ್ಯಗಳಲ್ಲಿನ ವಿಧಾನಸಭೆ ಚುನಾವಣೆ ನಂತರ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಮಾಡಬೇಕು ಎಂದು ಅಶೋಕ್ ಗೆಹ್ಲೋಟ್, ಅಮರಿಂದರ್ ಸಿಂಗ್, ಎ.ಕೆ.ಆಂಟನಿ, ತಾರಿಕ್ ಅನ್ವರ್ ಒತ್ತಾಯಿಸಿದರು.
ಈ ಮಧ್ಯೆ ಹಿರಿಯ ನಾಯಕರೊಬ್ಬರು, ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಗೆಲುವಿಗಾಗಿ ಸಂಘಟಿತರಾಗಿ ಹೋರಾಡಬೇಕು. ಸದ್ಯಕ್ಕೆ ಪಕ್ಷದ ಅಧ್ಯಕ್ಷರ ಚುನಾವಣೆ ಬಗ್ಗೆ ಮಾತನಾಡುವುದು ಬೇಡ. ಬಿಜೆಪಿಯವರು ಚುನಾವಣೆ ಗೆಲುವಿಗಾಗಿ ಕಸರತ್ತು ನಡೆಸುತ್ತಿರುವ ಈ ಸಮಯದಲ್ಲಿ ನಾವು ಆಂತರಿನ ಚುನಾವಣೆ ಬಗ್ಗೆ ಮಾತಾಡುವುದು ಸರಿಯಲ್ಲ ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಅಧ್ಯಕ್ಷರ ಗಾದಿ ಪೈಪೋಟಿಯಲ್ಲಿ ಸೋನಿಯಾ ಗಾಂಧಿ ಇಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಗಾಂಧಿಯೇತರ ಕುಟುಂಬಸ್ಥರಿಗೆ ಈ ಬಾರಿ ಅಧ್ಯಕ್ಷಗಾದಿ ಒಲಿಯುವ ನಿರೀಕ್ಷೆಯಿದೆ.
ಮತ್ತೆ ರಾಗಾ ಎಐಸಿಸಿ ಪಟ್ಟ ಅಲಂಕರಿಸುವಂತೆ ಪಟ್ಟು
ರಾಹುಲ್ ಗಾಂಧಿಯವರನ್ನು ಮತ್ತೆ ಎಐಸಿಸಿ ಅಧ್ಯಕ್ಷರನ್ನಾಗಿ ನೇಮಿಸುವಂತೆ ಕಿಸಾನ್ ಕಾಂಗ್ರೆಸ್ ಪಟ್ಟು ಹಿಡಿದಿದೆ. ರೈತರ ಹೋರಾಟ, ನಿರುದ್ಯೋಗದಂಥ ಸಮಸ್ಯೆಗಳನ್ನು ಪರಿಹರಿಸಲು ರಾಹುಲ್ ಗಾಂಧಿ ನಾಯಕತ್ವ ಅಗತ್ಯ ಎಂದಿದ್ದಾರೆ.