ಡೆಹ್ರಾಡೂನ್ (ಉತ್ತರಾಖಂಡ): ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಿದ ಗಂಭೀರ ಪ್ರಕರಣದಲ್ಲಿ ಉತ್ತರಾಖಂಡ ಕ್ರಿಕೆಟಿಗ ಸುಮಿತ್ ಜುಯಲ್ ದೋಷಿ ಎಂದು ವಿಶೇಷ ತ್ವರಿತ ನ್ಯಾಯಾಲಯ ಘೋಷಿಸಿದೆ. ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ಸಂಪೂರ್ಣ ವಿವರ: ಡೆಹ್ರಾಡೂನ್‌ನಲ್ಲಿ 2017ರ ಡಿಸೆಂಬರ್ 9ರಂದು ಬಾಲಕಿಯೊಬ್ಬಳು ತನ್ನ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಬಗ್ಗೆ ಮೃತಳ ತಂದೆ ಡಿಸೆಂಬರ್ 15ರಂದು ಇಲ್ಲಿನ ಕ್ಲೆಮೆಂಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಬಾಲಕಿ ಮೃತಪಟ್ಟ ಕೊಠಡಿಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದರು. ಈ ವೇಳೆ, ಆಕೆ ತನ್ನ ಮೊಬೈಲ್ ಚಾಟಿಂಗ್ ಅನ್ನು ಕೊನೆಯದಾಗಿ ಸುಮಿತ್ ಜುಯಲ್ ಜೊತೆ ಮಾಡಿದ್ದು ಪತ್ತೆಯಾಗಿತ್ತು. ''ಸುಮಿತ್ ನೀನು ಸುಧಾರಿಸಿಕೊಳ್ಳುವುದಿಲ್ಲ'' ಎಂಬ ಉಲ್ಲೇಖ ಮೊಬೈಲ್ ಚಾಟಿಂಗ್ನಲ್ಲಿತ್ತು. ಇದಲ್ಲದೇ ಆಕೆಯ ಡೈರಿಯಲ್ಲಿಯೂ ಸುಮಿತ್ ಬಗ್ಗೆ ಬರೆದುಕೊಂಡಿದ್ದನ್ನು ಪೊಲೀಸರು ಬಯಲು ಮಾಡಿದ್ದರು.
ಕ್ರೀಡೆ ಹೆಸರಲ್ಲಿ ವಂಚನೆ: ಕ್ರೀಡೆಯಲ್ಲಿ ಪಾಲ್ಗೊಳ್ಳುವ ಹೆಸರಲ್ಲಿ ಸುಮಿತ್ ಜುಯಲ್ ಬಾಲಕಿಯನ್ನು ಡೆಹ್ರಾಡೂನ್‌ನಿಂದ ಹೊರಗೆ ಕರೆದುಕೊಂಡು ಹೋಗುತ್ತಿದ್ದ. ಇದಕ್ಕಾಗಿ ಶಿಕ್ಷಕರ ಹೆಸರಲ್ಲಿ ನಕಲಿ ಪತ್ರಗಳನ್ನು ಸಿದ್ಧಪಡಿಸುತ್ತಿದ್ದ. ಈ ಪತ್ರದಲ್ಲಿ ಸುಮಿತ್ ತನ್ನ ಫೋನ್ ನಂಬರ್ ಬಳಕೆ ಮಾಡುತ್ತಿದ್ದ. ಇದನ್ನು ನಂಬಿ ಪೋಷಕರು ಆಕೆಗೆ ಮನೆಯಿಂದ ಹೊರಗಡೆ ಹೋಗಲು ಅವಕಾಶ ನೀಡುತ್ತಿದ್ದರು. ಆದರೆ, ಬಾಲಕಿಯನ್ನು ಸುಮಿತ್ ಕರೆದುಕೊಂಡು ಹೋಗಿ ಶೋಷಣೆ ಮಾಡುತ್ತಿದ್ದ. ಅಲ್ಲದೇ, ಆಕೆಗೆ ಬ್ಲಾಕ್ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಎಂಬೆಲ್ಲ ವಿಚಾರಗಳು ಪೊಲೀಸ್ ತನಿಖೆಯಲ್ಲಿ ದೃಢಪಟ್ಟಿತ್ತು. ಇದರ ಆಧಾರದ ಮೇಲೆ ಪೊಲೀಸರು ಸುಮಿತ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಚಾರ್ಜ್‌ಶೀಟ್ ಸಲ್ಲಿಸಿದ್ದರು.
ವಕೀಲರು ಹೇಳಿದ್ದೇನು?: ಬಾಲಕಿ ಆತ್ಮಹತ್ಯೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ 10 ಸಾಕ್ಷಿಗಳನ್ನು ಹಾಜರುಪಡಿಸಲಾಗಿದೆ. ಈ ಸಾಕ್ಷಿಗಳು ಮತ್ತು ತನಿಖೆಯಲ್ಲಿ ಸಿಕ್ಕ ಸಾಕ್ಷ್ಯಗಳ ಆಧಾರದ ಮೇಲೆ ನ್ಯಾಯಾಧೀಶ ಪಂಕಜ್ ತೋಮರ್ ಅವರು ಸುಮಿತ್ ಜುಯಲ್ನನ್ನು ತಪ್ಪಿತಸ್ಥ ಎಂದು ಪ್ರಕಟಿಸಿ, ಈ ತೀರ್ಪು ನೀಡಿದ್ದಾರೆ ಎಂದು ಸರ್ಕಾರಿ ವಕೀಲ ಕಿಶೋರ್ ಸಿಂಗ್ ಹೇಳಿದ್ದಾರೆ.
ಅಪರಾಧಿ ಸುಮಿತ್ ಉತ್ತರಾಖಂಡ ಕ್ರಿಕೆಟ್ ತಂಡದ ಉದಯೋನ್ಮುಖ ಆಟಗಾರನಾಗಿದ್ದು, ಮಧ್ಯಮ ವೇಗದ ಬೌಲರ್. ಪ್ರಸ್ತುತ ಹಿರಿಯ ಕ್ರಿಕೆಟ್ ತಂಡದ ಶಿಬಿರದಲ್ಲಿ ಭಾಗವಹಿಸಿದ್ದ. ಕೋರ್ಟ್ ಶಿಕ್ಷೆ ಪ್ರಕಟಿಸಿದ ನಂತರ ಆತನ ತಂದೆ ಯಾವುದೋ ನೆಪದಲ್ಲಿ ಭಾನುವಾರ ಶಿಬಿರದಿಂದ ಕರೆದುಕೊಂಡು ಬಂದಿದ್ದಾರೆ. 2019ರಲ್ಲೂ ವಂಚನೆ ಪ್ರಕರಣದಲ್ಲಿ ಸುಮಿತ್ ಹೆಸರು ಕೇಳಿ ಬಂದಿತ್ತು. ಉತ್ತರಾಖಂಡ ಅಂಡರ್-19 ಕ್ರಿಕೆಟ್ ತಂಡದ ಆಯ್ಕೆ ವೇಳೆ ವಯಸ್ಸಿನ ಬಗ್ಗೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಬಿಸಿಸಿಐ ಸುಮಿತ್ ಮೇಲೆ ಎರಡು ವರ್ಷಗಳ ಕಾಲ ನಿಷೇಧ ಹೇರಿತ್ತು.
ಇದನ್ನೂ ಓದಿ: Child marriage: ಅಪ್ರಾಪ್ತೆಯನ್ನು ಮದುವೆಯಾದ ಗ್ರಾ.ಪಂ ಅಧ್ಯಕ್ಷನ ವಿರುದ್ಧ ಪ್ರಕರಣ