ಲಖನೌ(ಉತ್ತರಪ್ರದೇಶ) : ಮ್ಯಾನ್ಮಾರ್ನಿಂದ ಅಕ್ರಮವಾಗಿ ಬಂದು ಇಲ್ಲಿ ವಾಸವಾಗಿರುವ ರೋಹಿಂಗ್ಯಾಗಳನ್ನು ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಕಾರ್ಯಾಚರಣೆ ನಡೆಸಿ ಬಂಧಿಸಿದೆ. 8 ತಾಸಿನಲ್ಲಿ ರಾಜ್ಯದ ವಿವಿಧೆಡೆ 80 ಕ್ಕೂ ಅಧಿಕ ಮುಸ್ಲಿಮರನ್ನು ವಶಕ್ಕೆ ಪಡೆದು ಪೊಲೀಸ್ ವಾಹನಗಳಲ್ಲಿ ಕರೆದೊಯ್ಯಲಾಗಿದೆ.
ರಾಜ್ಯದ ವಿವಿಧೆಡೆ ರೋಹಿಂಗ್ಯಾ ಮುಸ್ಲಿಮರು ವಾಸವಾಗಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಎಟಿಎಸ್, ಪೊಲೀಸರ ಜೊತೆಗೂಡಿ ಭಾನುವಾರ ರಾತ್ರಿಯಿಂದ ಕಾರ್ಯಾಚರಣೆ ನಡೆಸಿತು. ಅಕ್ರಮವಾಗಿ ನೆಲೆಸಿರುವವರನ್ನು ಬಂಧಿಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.
ಮಥುರಾದಲ್ಲಿ 40 ಕ್ಕೂ ಹೆಚ್ಚು, ಅಲಿಘಡ್‌ನಲ್ಲಿ 17, ಹಾಪುರದಲ್ಲಿ 16, ಘಾಜಿಯಾಬಾದ್ ಹಾಗೂ ಮೀರತ್‌ನಲ್ಲಿ ತಲಾ 4 ಹಾಗೂ ಶಹರಣ್‌ಪುರ್‌ನಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಇದರಲ್ಲಿ ಐವರು ಮಕ್ಕಳು, 16 ಮಹಿಳೆಯರೂ ಇದ್ದಾರೆ. ಬಂಧಿತರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಕಾನೂನು ರೀತ್ಯಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದರು.
ಕೊಳೆಗೇರಿಗಳಲ್ಲಿ ವಾಸ: ಮ್ಯಾನ್ಮಾರ್ನಲ್ಲಿ ಸೇನೆ ನಡೆಸುತ್ತಿರುವ ಕಾರ್ಯಾಚರಣೆಯಿಂದಾಗಿ ಅಲ್ಲಿನ ರೋಹಿಂಗ್ಯಾ ಮುಸ್ಲಿಮರು ವಿವಿಧ ದೇಶಗಳಿಗೆ ಸಾವಿರಾರು ಸಂಖ್ಯೆಯಲ್ಲಿ ವಲಸೆ ಹೋಗುತ್ತಿದ್ದಾರೆ. ಅದರಲ್ಲಿ ಭಾರತಕ್ಕೆ ಅಕ್ರಮವಾಗಿ ಬಂದು ನೆಲೆ ನಿಲ್ಲುತ್ತಿದ್ದಾರೆ. ಉತ್ತರಪ್ರದೇಶಕ್ಕೂ ಇವರು ಅಕ್ರಮವಾಗಿ ತೂರಿಕೊಂಡಿದ್ದು, ಎಟಿಎಸ್ ಕಾರ್ಯಾಚರಣೆ ನಡೆಸುತ್ತಿದೆ.
ಮಥುರಾದಲ್ಲಿ ಹೆಚ್ಚು: ಮಥುರಾ ಜಿಲ್ಲೆಯ ಜೈಂಟ್ ಪೊಲೀಸ್ ಠಾಣಾ ವ್ಯಾಪ್ತಿಯ ಅಲ್ಹಾಪುರ್ ಮತ್ತು ಕೋಟಾ ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯ ರೋಹಿಂಗ್ಯಾ ಮುಸ್ಲಿಮರನ್ನು ಬಂಧಿಸಲಾಗಿದೆ. ಅಲ್ಹಾಪುರ ಮತ್ತು ಕೋಟಾ ನಡುವಿನ ಕೊಳೆಗೇರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದರು. ಬಾಂಗ್ಲಾದೇಶದ ಗಡಿ ದಾಟಿ ಅಕ್ರಮವಾಗಿ ಭಾರತಕ್ಕೆ ಬಂದಿದ್ದರು. ನಂತರ ಅವರು ಇಲ್ಲಿ ವಾಸಿಸಲು ಪ್ರಾರಂಭಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದರು.
ಎಟಿಎಸ್‌ಗೆ ರೋಹಿಂಗ್ಯಾಗಳ ಬಗ್ಗೆ ಸುಳಿವು ಸಿಕ್ಕಿತು. ಕಾರ್ಯಾಚರಣೆ ಗೌಪ್ಯ ರೀತಿಯಲ್ಲಿ ನಡೆಸಲಾಯಿತು. ಸ್ಥಳೀಯ ಪೊಲೀಸರ ಜತೆಗೆ ಅಧಿಕಾರಿಗಳು ಕೊಳೆಗೇರಿಗೆ ತೆರಳಿ ಅಕ್ರಮವಾಗಿ ವಾಸಿಸುತ್ತಿರುವ ರೋಹಿಂಗ್ಯಾಗಳ ದಾಖಲೆಗಳನ್ನು ಪರಿಶೀಲಿಸಿತು. ಇದರ ನಂತರ, 40 ಕ್ಕೂ ಹೆಚ್ಚು ಜನರನ್ನು ಬಂಧಿಸಿ, ತಮ್ಮ ವ್ಯಾನ್ಗಳಲ್ಲಿ ಕರೆದೊಯ್ಯಲಾಯಿತು.
ದೇಶದ ವಿವಿಧೆಡೆ ಬಂಧನ: ಅಕ್ರಮವಾಗಿ ದೇಶದೊಳಕ್ಕೆ ನುಗ್ಗಿ ಬಂದಿರುವ ರೋಹಿಂಗ್ಯಾಗಳನ್ನು ಬಂಧಿಸುವ ಕಾರ್ಯ ಎಲ್ಲೆಡೆ ನಡೆಯುತ್ತಿದೆ. ಕಾಶ್ಮೀರದಲ್ಲಿ ಮೂರು ದಿನಗಳ ಹಿಂದೆ ಬಂಧಿಸಲಾಗಿದ್ದ ರೋಹಿಂಗ್ಯಾಗಳ ಬಿಡುಗಡೆ ಮತ್ತು ಮ್ಯಾನ್ಮಾರ್ಗೆ ವಾಪಸ್ ಕಳುಹಿಸಲು ಆಗ್ರಹಿಸಿ ಕಾರಾಗೃಹದ ಮುಂದೆ ಪ್ರತಿಭಟನೆ ನಡೆಸಲಾಗಿತ್ತು.
ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 270 ರೋಹಿಂಗ್ಯಾ ನಿರಾಶ್ರಿತರನ್ನು ವಿಶೇಷ ಕಾರಾಗೃಹದಲ್ಲಿ 2 ವರ್ಷಗಳಿಂದ ಬಂಧಿಸಲಾಗಿದೆ. ದೀರ್ಘ ಕಾಲದ ಬಂಧನದ ವಿರುದ್ಧ ಬಂಧಿತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಜೈಲಿನಲ್ಲಿ ರೇಡಿಯೋ ಕೇಂದ್ರ, ಕೈದಿಗಳೇ ರೇಡಿಯೋ ಜಾಕಿಗಳು: ಆಗಸ್ಟ್ 15 ರಿಂದ ಕಾರ್ಯಾರಂಭ