ಆಗ್ರಾ (ಉತ್ತರಪ್ರದೇಶ) : ಮಗಳ ಕೆಟ್ಟ ಚಟಗಳಿಂದ ಮನೆಯಲ್ಲಿ ನೆಮ್ಮದಿ ಹಾಳಾಗಿದೆ. ಮೊಬೈಲ್ನಲ್ಲಿ ಅಪರಿಚಿತರ ಜೊತೆ ಅಸಭ್ಯವಾಗಿ ಮಾತನಾಡುತ್ತಾಳೆ. ಕುಟುಂಬದ ವಾತಾವರಣವನ್ನೇ ಹಾಳು ಮಾಡಿದ್ದಾಳೆ. ಈಕೆಯ ವಿರುದ್ಧ ಕ್ರಮ ಕೈಗೊಳ್ಳಿ ಎಂದು ತಾಯಿಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಆರಕ್ಷಕರು ತನಿಖೆ ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣದ ಹಿನ್ನೆಲೆ: ಹೊಸ ಆಗ್ರಾ ನಿವಾಸಿಗಳಾದ ಕುಟುಂಬದ ಮಹಿಳೆಯೊಬ್ಬರು ತಮ್ಮ ಮಗಳ ವಿರುದ್ಧವೇ ಕೇಸ್ ದಾಖಲಿಸಿದ್ದಾರೆ. ಮಗಳು ಕೆಟ್ಟ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದಾಳೆ. ಮದುವೆಗೂ ಮೊದಲು ಎಂಟು ವರ್ಷಗಳ ಹಿಂದೆ ಯಾವುದೋ ಹುಡುಗನ ಜೊತೆಗೆ ನಾಪತ್ತೆಯಾಗಿದ್ದಳು. ಆತ ದ್ರೋಹ ಮಾಡಿದ ನಂತರ, ಮನೆಗೆ ಮರಳಿದಳು. ನಾವೆಲ್ಲರೂ ಕಷ್ಟಪಟ್ಟು ಆಕೆಗೆ ರಾಜಸ್ಥಾನದ ಜೋಧ್‌ಪುರದ ಯುವಕನೊಂದಿಗೆ ಮದುವೆ ಮಾಡಿಸಿದೆವು. ಒಂದು ಮಗುವೂ ಆಗಿದೆ. ಕೆಲವು ದಿನಗಳ ಕಾಲ ಚೆನ್ನಾಗಿದ್ದ ಆಕೆ, ಮತ್ತೆ ಬೇರೊಬ್ಬ ಹುಡುಗನೊಂದಿಗೆ ಮನೆಯಿಂದ ಓಡಿಹೋಗಿದ್ದಳು.
ತನ್ನ ಮಗಳ ಇಂತಹ ಕೆಟ್ಟ ಚಟಗಳಿಂದಾಗಿ ಪತಿ ಆಕೆಗೆ ವಿಚ್ಚೇದನ ನೀಡಿದ್ದಾನೆ. ಇದರಿಂದಾಗಿ ಆಕೆ ತವರಿಗೆ ಬಂದು ನೆಲೆಸಿದ್ದಾಳೆ. ಫೋನ್ನಲ್ಲಿ ವಿಡಿಯೋ ಕಾಲ್ ಮೂಲಕ ಅಪರಿಚಿತರೊಂದಿಗೆ ಅಸಭ್ಯವಾಗಿ ಮಾತನಾಡುತ್ತಾಳೆ. ನಾನು ವೃದ್ಧೆಯಾಗಿದ್ದರೂ, ಅವಳ ಮಗುವನ್ನು ನಾನು ಪೋಷಿಸಬೇಕಿದೆ. ಇದನ್ನು ವಿರೋಧಿಸಿದರೆ ಸುಳ್ಳು ಪ್ರಕರಣ ದಾಖಲಿಸುವ ಬೆದರಿಕೆ ಹಾಕುತ್ತಿದ್ದಾಳೆ. ತಂದೆಯ ಆಸ್ತಿಯಲ್ಲಿ ತನಗೂ ಹಕ್ಕಿದೆ ಎಂದು ವಾದಿಸುತ್ತಾಳೆ. ಮಗಳ ಇಂತಹ ನಡೆ ಮನೆಯ ಸೊಸೆ ಮತ್ತು ಇತರ ಮಕ್ಕಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಕೆಟ್ಟ ಮಗಳಿಗೆ ತಂದೆಯ ಬೆಂಬಲ: ಮಗಳ ಇಂತಹ ಕೊಳಕು ಚಟುವಟಿಕೆಗಳನ್ನು ಟೀಕಿಸಿ ಬುದ್ಧಿವಾದ ಹೇಳಬೇಕಾದ ತಂದೆ ಕೂಡ ಆಕೆಯ ತಾಳಕ್ಕೆ ಕುಣಿಯುತ್ತಿದ್ದಾನೆ. ಮಗಳು ಏನೇ ಮಾಡಿದರೂ ಸಹಿಸಿಕೊಂಡು ಬೆಂಬಲ ನೀಡುತ್ತಿದ್ದಾನೆ. ಕುಡಿತದ ಚಟ ಹೊಂದಿರುವ ತನ್ನ ಪತಿ, ಮಗಳು ಕೇಳಿದಂತೆ ಹಣ ನೀಡಿ ಇನ್ನಷ್ಟು ಹಾಳಾಗಲು ಅವಕಾಶ ಮಾಡಿಕೊಡುತ್ತಿದ್ದಾನೆ. ಮಗಳು ಮನೆಯ ವಾತಾವರಣವನ್ನು ನರಕದಂತೆ ಮಾಡಿದ್ದಾಳೆ. ಮಗಳು- ತಂದೆ ಇಬ್ಬರನ್ನೂ ಬಂಧಿಸಬೇಕು ಎಂದು ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.
ವೃದ್ಧೆ ನೀಡಿದ ಲಿಖಿತ ದೂರಿನ ಮೇರೆಗೆ ಆರೋಪಿ ಮಗಳು ಮತ್ತು ತಂದೆ ವಿರುದ್ಧ ಹಲ್ಲೆ ಮತ್ತು ಕೊಲೆ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೊಸ ಆಗ್ರಾ ಪೊಲೀಸ್ ಠಾಣೆ ಅಧಿಕಾರಿ ರಾಜೀವ್ ಕುಮಾರ್ ತಿಳಿಸಿದರು.
ಇದನ್ನೂ ಓದಿ: ಸೇಫ್ಟಿ ಪಿನ್ ನುಂಗಿದ 5 ತಿಂಗಳ ಮಗು: ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದು ಪ್ರಾಣ ರಕ್ಷಿಸಿದ ವೈದ್ಯರು