ಇಟಾವ (ಉತ್ತರ ಪ್ರದೇಶ): ಇಬ್ಬರು ಪುಟ್ಟ ಸಹೋದರಿಯರನ್ನು ಕೊಲೆಗೈದ ಆರೋಪದಡಿ 18 ವರ್ಷದ ಯುವತಿಯನ್ನು ಉತ್ತರ ಪ್ರದೇಶದ ಇಟಾವ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಯುವತಿ ತನ್ನ ಪ್ರಿಯಕರನೊಂದಿಗೆ ಅಸಭ್ಯ ಸ್ಥಿತಿಯಲ್ಲಿದ್ದ ಸಂದರ್ಭವನ್ನು ಈ ಬಾಲಕಿಯರು ನೋಡಿದ್ದರು. ಇದರಿಂದಾಗಿಯೇ ತಂಗಿಯರನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಯುವತಿಯನ್ನು ಬಂಧಿಸಿ ಇತರ ಮೂವರು ಪುರುಷರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಇಲ್ಲಿನ ಬಲರಾಯ್ ಪೊಲೀಸ್ ಠಾಣಾ ವ್ಯಾಪ್ತಿಯ ಬಹುದ್ದೂರ್ಪುರ ಗ್ರಾಮದಲ್ಲಿ ಆರು ಹಾಗೂ ನಾಲ್ಕು ವರ್ಷದ ಬಾಲಕಿಯರ ಮೃತದೇಹಗಳು ಶಿರಚ್ಛೇದಗೊಂಡ ಸ್ಥಿತಿಯಲ್ಲಿ ಭಾನುವಾರ ರಾತ್ರಿ ಪತ್ತೆಯಾಗಿದ್ದವು. ಸಾವಿಗೀಡಾದ ಬಾಲಕಿಯರು ಜೈವೀರ್ ಸಿಂಗ್ ಎಂಬವರು ಪುತ್ರಿಯರು ಎಂದು ಗುರುತಿಸಲಾಗಿದೆ. ಇವರ ಕುಟುಂಬದಲ್ಲಿ ಜೈವೀರ್ ಸಿಂಗ್ ಮತ್ತು ಪತ್ನಿ ಹಾಗೂ 12 ವರ್ಷ, 8 ವರ್ಷದ ಪುತ್ರರು ಇದ್ದಾರೆ. ಆದರೆ, ಘಟನೆ ನಡೆದ ಸಂದರ್ಭದಲ್ಲಿ ಮನೆಯಲ್ಲಿ ಬಾಲಕಿಯರು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನಡೆದಿದ್ದೇನು?: ಅಂಜಲಿ ಪಾಲ್ ಎಂಬಾಕೆಯೇ ಬಂಧಿತ ಆರೋಪಿ. ಭಾನುವಾರ ಮನೆಯಲ್ಲಿ ತಂದೆ-ತಾಯಿ ಇರದ ಸಂದರ್ಭದಲ್ಲಿ ತನ್ನ ಪ್ರಿಯಕರನೊಂದಿಗೆ ಮನೆಯಲ್ಲಿ ಆತ್ಮೀಯ ಹಾಗೂ ಸಲುಗೆಯಿಂದ ಇದ್ದಳು. ಈ ದೃಶ್ಯಗಳನ್ನು ತನ್ನ ಇಬ್ಬರು ತಂಗಿಯರು ಗಮನಿಸಿದ್ದರು. ಹೀಗಾಗಿ ಈ ವಿಷಯವನ್ನು ಅವರು ಪೋಷಕರಿಗೆ ತಿಳಿಸುವ ಭಯದಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
''ಮನೆಯಲ್ಲಿ ಯಾರೂ ಇರದಿದ್ದ ಸಂದರ್ಭದಲ್ಲಿ ಸಲಾಕೆಯಿಂದ ಕೊಚ್ಚಿ ಕೊಲೆ ಮಾಡಿದ್ದಾಳೆ. ಒಂದು ಕೊಠಡಿಯಲ್ಲಿ ಮುಂಡಗಳು ಬಿದ್ದಿದ್ದರೆ, ಮತ್ತೊಂದು ಕೊಠಡಿಯಲ್ಲಿ ರುಂಡಗಳು ಬಿದ್ದಿದ್ದವು. ಹತ್ಯೆಗೈದ ಬಳಿಕ ಸಾಕ್ಷ್ಯನಾಶ ಪಡಿಸುವ ಯತ್ನವೂ ನಡೆದಿದೆ. ಕೃತ್ಯಕ್ಕೆ ಬಳಸಿದ್ದ ಸಲಾಕೆಯನ್ನು ಶುಚಿ ಮಾಡಲಾಗಿತ್ತು. ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಸಲಾಕೆ ಹಾಗೂ ಬಟ್ಟೆಯಲ್ಲಿ ಮೇಲೆ ರಕ್ತದ ಕುರುಹುಗಳು ಇರುವುದು ದೃಢಪಟ್ಟಿದೆ" ಎಂದು ಗ್ರಾಮೀಣ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸತ್ಯಪಾಲ್ ಸಿಂಗ್ ಮಾಹಿತಿ ನೀಡಿದ್ದಾರೆ.
ಆರಂಭದಲ್ಲಿ ಸುಳ್ಳು ಹೇಳಿದ್ದ ಆರೋಪಿ: ''ಪೊಲೀಸ್ ವಿಚಾರಣೆಯ ಆರಂಭದಲ್ಲಿ ಆರೋಪಿ ಯುವತಿ ಸುಳ್ಳು ಹೇಳಿಕೆ ನೀಡಿದ್ದಳು. ನಾನು ಮನೆಗೆ ಬರುವ ಮುಂಚೆಯೇ ಇಬ್ಬರು ಸಹೋದರಿಯರ ರುಂಡ ಮತ್ತು ಮುಂಡಗಳು ಬೇರೆ-ಬೇರೆ ಕೊಠಡಿಯಲ್ಲಿ ಬಿದ್ದವು ಎಂದಿದ್ದಳು. ಬಳಿಕ ತನ್ನ ಕೃತ್ಯವನ್ನು ಆರೋಪಿ ಒಪ್ಪಿಕೊಂಡಿದ್ದಾಳೆ. ಆದ್ದರಿಂದ ಸೋಮವಾರ ಬೆಳಗ್ಗೆ ಆಕೆಯನ್ನು ಬಂಧಿಸಲಾಗಿದೆ'' ಎಂದು ಕಾನ್ಪುರ ವಲಯದ ಐಜಿ ಪ್ರಶಾಂತ್ ಕುಮಾರ್ ಹೇಳಿದರು.
ಈ ಘಟನೆ ಸಂಬಂಧ ಐಪಿಸಿ ಸೆಕ್ಷನ್ 302 (ಕೊಲೆ) ಹಾಗೂ 201 (ಸಾಕ್ಷ್ಯ ನಾಶ ಅಥವಾ ಸುಳ್ಳು ಮಾಹಿತಿ ನೀಡುವುದು) ಅಡಿ ಪ್ರಕರಣ ದಾಖಲಾಗಿದೆ. ಬಂಧಿತ ಯುವತಿ ಜೊತೆಗೆ ಇತರ ಮೂವರು ಪುರುಷರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಸಿವಿಲ್ ಕಂಟ್ರಾಕ್ಟರ್ ಅರೆಸ್ಟ್