ಹತ್ರಾಸ್, ಉತ್ತರಪ್ರದೇಶ: ಜಿಲ್ಲೆಯಲ್ಲಿ ಮಾನಹಾನಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮುರ್ಸಾನ್ನ ಗ್ರಾಮವೊಂದರಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣ ವರದಿಯಾಗಿದೆ. ಅಷ್ಟೇ ಅಲ್ಲ ಅತ್ಯಾಚಾರದ ವಿಡಿಯೋ ಚಿತ್ರಿಕರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ತಿಳಿದು ಬಂದಿದೆ. ಸದ್ಯ ಅತ್ಯಾಚಾರ ವಿಡಿಯೋ ವೈರಲ್ ಆಗಿದ್ದು, ಸಂತ್ರಸ್ತೆಯ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮಾಹಿತಿ ಪ್ರಕಾರ, ಮಹಿಳೆಯ ಪತಿ ಟ್ರಕ್ ಚಾಲಕ. ಹೀಗಾಗಿ ಅವರು ಹೆಚ್ಚಿನ ಸಮಯ ಮನೆಯಿಂದ ಹೊರಗೇ ಇರುತ್ತಾರೆ. ತನ್ನ ಮಕ್ಕಳೊಂದಿಗೆ ಒಂಟಿಯಾಗಿ ವಾಸಿಸುತ್ತಿರುವುದಾಗಿ ಮಹಿಳೆ ತಿಳಿಸಿದ್ದಾರೆ. ಕಳೆದ ಫೆಬ್ರವರಿ 26 ರಂದು ಸಂಜೆ 4 ಗಂಟೆ ಸುಮಾರಿಗೆ ಮನೆಯಿಂದ ಜಾನುವಾರುಗಳಿಗೆ ಮೇವು ಸಂಗ್ರಹಿಸಲು ಹೋಗಿದ್ದರು. ಸಾಸಿವೆ ಗದ್ದೆಗೆ ಆಕೆ ತಲುಪುತ್ತಿದ್ದಂತೆ ಅಲ್ಲಿಯೇ ನಿಂತಿದ್ದ ಗ್ರಾಮದ ನಾಲ್ವರು ಯುವಕರು ಆಕೆಯನ್ನು ತಡೆದಿದ್ದಾರೆ. ಈ ವೇಳೆ ಯುವಕನೊಬ್ಬ ತನ್ನ ಬಳಿಯಿದ್ದ ಪಿಸ್ತೂಲ್ ಹೊರ ತೆಗೆದು ಆಕೆ ತಲೆಗೆ ಗುರಿ ಇಟ್ಟಿದ್ದಾನೆ. ಬಳಿಕ ಕೂಗಾಡಿದ್ರೆ ನಿನ್ನನ್ನು ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಉಳಿದ ಮೂವರು ಆಕೆಯನ್ನು ಬಲವಂತವಾಗಿ ಎತ್ತಿಕೊಂಡು ಗದ್ದೆಯೊಳಗೆ ಕರೆದೊಯ್ದರು. ಬಳಿಕ ನಾಲ್ವರೂ ಸೇರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಆರೋಪಿಗಳು ಅತ್ಯಾಚಾರದ ವಿಡಿಯೋ ಕೂಡ ಮಾಡಿದ್ದರು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಯಾರಿಗಾದರೂ ಹೇಳಿದರೆ ಅಥವಾ ಪೊಲೀಸರಿಗೆ ದೂರು ನೀಡಿದರೆ ವಿಡಿಯೋವನ್ನು ವೈರಲ್ ಮಾಡುವುದಾಗಿ ನಾಲ್ವರು ಬೆದರಿಕೆ ಹಾಕಿದ್ದಾರೆ. ಅಲ್ಲದೇ ಗಂಡ ಮತ್ತು ಮಕ್ಕಳನ್ನು ಕೊಲೆ ಮಾಡುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲ ವಿಡಿಯೋ ಇಟ್ಟುಕೊಂಡು ಆ ನಾಲ್ವರೂ ಆಕೆಯನ್ನು ಬ್ಲಾಕ್ಮೇಲ್ ಮಾಡಿ ನಿರಂತರ ಅತ್ಯಾಚಾರ ಎಸಗಿದ್ದಾರೆ. ಆರೋಪಿಗಳು ಇದೀಗ ಆಕೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ನಮೂದಿಸಿದ್ದಾರೆ.
ಈ ಘಟನೆ ಕುರಿತು ಮಹಿಳೆ ತನ್ನ ಕುಟುಂಬದ ಸದಸ್ಯರಿಗೆ ಮಾಹಿತಿ ತಿಳಿಸಿದ್ದಾರೆ. ಮಂಗಳವಾರ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. ತಹ್ರೀರ್ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಸಂಬಂಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಮತ್ತೊಬ್ಬ ಆರೋಪಿಗಾಗಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಎಸ್ಪಿ ದೇವೇಶ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ಓದಿ: ಬೆಂಗಳೂರು: ಯುವ ವಿಜ್ಞಾನಿಯ ಕಾರಿನ ಗಾಜು ಒಡೆದು ಹಲ್ಲೆಗೆ ಯತ್ನಿಸಿದ ಕಿಡಿಗೇಡಿಗಳು