ಕಾನ್ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಕಾನ್ಪುರದ ದೊಡ್ಡ ಸೀರೆ ಉದ್ಯಮಿಯೊಬ್ಬರ ಪುತ್ರನನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸೇಠ್ ಆನಂದರಾಮ್ ಜೈಪುರಿಯಾ ಶಾಲೆಯ 10 ನೇ ತರಗತಿ ವಿದ್ಯಾರ್ಥಿ ಕುಶಾಗ್ರ ಅವರ ಮೃತದೇಹವನ್ನು ಮಂಗಳವಾರ ಅವರ ಟ್ಯೂಷನ್ ಶಿಕ್ಷಕಿಯ ಸಹೋದ್ಯೋಗಿಯ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ.
ಟ್ಯೂಷನ್ ಶಿಕ್ಷಕಿರೊಂದಿಗೆ ಅಕ್ರಮ ಸಂಬಂಧ: ಪೊಲೀಸರ ಪ್ರಕಾರ, ವಿದ್ಯಾರ್ಥಿ ತನ್ನ ಟ್ಯೂಷನ್ ಶಿಕ್ಷಕಿರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನು ಎಂಬುದು ಬೆಳಕಿಗೆ ಬಂದಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಮಹಿಳಾ ಟ್ಯೂಷನ್ ಶಿಕ್ಷಕಿ ಸೇರಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಕಾನ್ಪುರ ನಗರದ ರಾಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಉದ್ಯಮಿ ಮನೀಶ್ ಕನೋಡಿಯಾ ಅವರ ಪುತ್ರ ಕುಶಾಗ್ರ 10ನೇ ತರಗತಿ ಓದುತ್ತಿದ್ದ. ನಿತ್ಯದಂತೆ ಸೋಮವಾರವೂ ಕೋಚಿಂಗ್‌ಗೆ ತೆರಳಿದ್ದ. ಪುತ್ರ ಮನೆಗೆ ಬಾರದೇ ಆತನ ತಾಯಿ ಚಿಂತೆಗೆ ಈಡಾಗಿದ್ದರು. ಕುಶಾಗ್ರನ ತಾಯಿ ಆತನ ಅಜ್ಜ ಸಂಜಯ್ ಕನೋಡಿಯಾ ಮತ್ತು ತಂದೆ ಮನೀಶ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಮನೆಯವರು ಆತನಿಗಾಗಿ ಹುಡುಕಾಟ ಆರಂಭಿಸಿದ್ದರು. ಆದರೆ, ಎಲ್ಲಿಯೂ ಆತನ ಕುರುಹು ಪತ್ತೆಯಾಗಿಲ್ಲ. ಬಳಿಕ ಕುಟುಂಬಸ್ಥರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ವಿದ್ಯಾರ್ಥಿಯ ಪೋಷಕರು ಹೇಳಿದ್ದು ಹೀಗೆ: ಮನೀಶ್ ಕನೋಡಿಯಾ ಪ್ರಕಾರ, ಕೋಚಿಂಗ್‌ಗೆ ಹೋದ ತಕ್ಷಣ ಮಗನನ್ನು ಕಿಡ್ನಾಪ್ ಮಾಡಲಾಗಿದೆ. ಮನೆಯವರ ದೂರಿನ ಮೇರೆಗೆ ಪೊಲೀಸರು ರಾತ್ರಿಯಿಡೀ ವಿದ್ಯಾರ್ಥಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, ಮನೆಯಿಂದ ಸ್ವಲ್ಪ ದೂರದಲ್ಲಿ ಬೈಕ್ ನಿಲ್ಲಿಸಿರುವುದು ಪತ್ತೆಯಾಗಿದೆ ಎಂದು ಕುಶಾಗ್ರ ಕುಟುಂಬಸ್ಥರು ತಿಳಿಸಿದ್ದಾರೆ.
''ನಿಮ್ಮ ಮಗನ ಸುರಕ್ಷತೆ ಬೇಕಾದರೆ 30 ಲಕ್ಷ ರೂಪಾಯಿ ಕೊಡಿ'' ಎಂದು ಬರೆದಿರುವ ಕಾಗದವೊಂದು ಉದ್ಯಮಿಯ ಮನೆ ಬಳಿ ದೊರೆತಿತ್ತು. ಅಪಹರಣದ ಮಾಹಿತಿ ಪಡೆದು ಪೊಲೀಸರು ತೀವ್ರ ತಪಾಸಣೆ ಆರಂಭಿಸಿದ್ದರು. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಮನೀಶ್ ಕನೋಡಿಯಾ ಮನೆಗೆ ವ್ಯಕ್ತಿಯೊಬ್ಬ ಸ್ಕೂಟರ್ನಲ್ಲಿ ಬಂದು, ಕಲ್ಲಿಗೆ ಕಾಗದ ಸುತ್ತಿ ಎಸೆದಿದ್ದಾನೆ. ಅವನ ಸಂಪೂರ್ಣ ಚಟುವಟಿಕೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದಾದ ಬಳಿಕ ಪೊಲೀಸರು ಟ್ಯೂಷನ್ ಶಿಕ್ಷಕಿಯನ್ನು ಬಂಧಿಸಿದ್ದಾರೆ.
ಪೊಲೀಸರು ಹೇಳಿದ್ದೇನು?: 10ನೇ ತರಗತಿ ವಿದ್ಯಾರ್ಥಿ ಕುಶಾಗ್ರ ಹತ್ಯೆಯನ್ನು ಕಾನೂನು ಮತ್ತು ಸುವ್ಯವಸ್ಥೆಯ ಜಂಟಿ ಪೊಲೀಸ್ ಆಯುಕ್ತ ಆನಂದ್ ಪ್ರಕಾಶ್ ತಿವಾರಿ ಖಚಿತಪಡಿಸಿದ್ದಾರೆ. ಟ್ಯೂಷನ್ ಶಿಕ್ಷಕಿಗೆ ತಿಳಿದಿರುವ ಯುವಕನೊಬ್ಬ ಕುಶಾಗ್ರನನ್ನು ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಇಂದು (ಮಂಗಳವಾರ) ಬೆಳಗ್ಗೆ, ಕೊಲೆ ಆರೋಪಿ ಯುವಕನ ಫಜಲ್ಗಂಜ್ ನಿವಾಸದಲ್ಲಿ ವಿದ್ಯಾರ್ಥಿ ಕುಶಾಗ್ರ ಶವವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳ ಗುರುತನ್ನು ಶೀಘ್ರವೇ ಬಹಿರಂಗಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪೋಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಇದನ್ನೂ ಓದಿ: ಮರಕ್ಕೆ ಕಾರು ಡಿಕ್ಕಿ: 4 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರ ಸಾವು