ಪಿಥೋರಗಢ (ಉತ್ತರಾಖಂಡ) : ಮಾದಕ ವಸ್ತು ಕಳ್ಳ ಸಾಗಣೆಯಲ್ಲಿ ತೊಡಗಿದ್ದ ನೇಪಾಳಿ ಮಹಿಳೆಗೆ ಉತ್ತರಾಖಂಡ್ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿದೆ. ವಿಶೇಷ ಸೆಷನ್ಸ್ ನ್ಯಾಯಾಧೀಶರಾದ ಶಂಕರರಾಜ್ ಅವರು ಮಹಿಳೆಗೆ ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಜೊತೆಗೆ ಒಂದೂವರೆ ಲಕ್ಷ ರೂಪಾಯಿ ದಂಡ ಪಾವತಿವಂತೆ ಸೂಚಿಸಿದ್ದಾರೆ.
ಪ್ರಕರಣದ ಹಿನ್ನೆಲೆ : ಸರ್ಕಾರ ಪರ ವಕೀಲರ ಪ್ರಕಾರ, ಆರೋಪಿ ಅನುಷ್ಕಾ ಬುಧಾಥೋ ಎಂಬ ನೇಪಾಳಿ ಮಹಿಳೆಗೆ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಈ ಮಹಿಳೆ ಮೂಲತಃ ನೇಪಾಳದ ದಾರ್ಚುಲಾ ಡುಮಾಲಿಂಗ್ ನಿವಾಸಿಯಾಗಿದ್ದಾಳೆ. ಈಕೆ ಕಳೆದ 2021ರಲ್ಲಿ ದಾರ್ಚುಲಾ ಜುಲಾಪುಲ್‌ನಲ್ಲಿ ಮಾದಕ ವಸ್ತು ಕಳ್ಳ ಸಾಗಣೆ ಮಾಡುವಾಗ ಪೊಲೀಸರ ಕೈ ಸಿಕ್ಕಿಬಿದ್ದಿದ್ದಳು. ಈಕೆಯಿಂದ ಸುಮಾರು 1.4 ಕೆಜಿ ಮಾದಕ ವಸ್ತುವನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಈ ಮಹಿಳೆಯು ತನ್ನ ದೇಹದಲ್ಲಿ ಮಾದಕವಸ್ತುಗಳನ್ನು ಬಚ್ಚಿಟ್ಟುಕೊಂಡು ಭಾರತಕ್ಕೆ ಕಳ್ಳಸಾಗಣೆ ಮಾಡುತ್ತಿದ್ದಳು. ಈ ವೇಳೆ ಆಕೆಯನ್ನು ಬಂಧಿಸಿದ್ದ ಕೊಟ್ವಾಲಿಯ ದಾರ್ಚುಲಾ ಪೊಲೀಸರು, ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.
ಜೈಲಿನಿಂದ ಪರಾರಿಯಾಗಿದ್ದ ಖತರ್ನಾಕ್ ಮಹಿಳೆ : ಪ್ರಕರಣ ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಈ ಮಹಿಳೆ ಒಂದು ದಿನ ರಾತ್ರಿ ಜೈಲಿನಿಂದ ಪರಾರಿಯಾಗಿದ್ದಳು. ಆಗಸ್ಟ್ 8 ರಂದು ಮಹಿಳೆಗೆ ಶಿಕ್ಷೆ ಆಗಬೇಕಿತ್ತು. ಆದರೆ ಮಹಿಳೆಯು ಆಗಸ್ಟ್ 6ರ ರಾತ್ರಿ ಜೈಲಿನಿಂದ ಪರಾರಿಯಾಗಿದ್ದಳು. ಈಕೆಯ ಆನುಪಸ್ಥಿತಿಯಲ್ಲಿ ವಿಶೇಷ ಸೆಷನ್ಸ್ ನ್ಯಾಯಾಧೀಶರಾದ ಶಂಕರ್ ರಾಜ್ ಅವರು ಪ್ರಕರಣದ ವಿಚಾರಣೆ ನಡೆಸಿದರು. ಬಳಿಕ ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಮಹಿಳೆಯನ್ನು ತಪ್ಪಿತಸ್ಥಳೆಂದು ಘೋಷಿಸಿ ಶಿಕ್ಷೆಯನ್ನು ಪ್ರಕಟಿಸಿತು.
ಈ ಮಹಿಳೆಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 1.5 ಲಕ್ಷ ರೂಪಾಯಿ ದಂಡ ವಿಧಿಸಿ ಉತ್ತರಾಖಂಡ್ ನ್ಯಾಯಾಲಯವು ಆದೇಶಿಸಿತು. ಒಂದು ವೇಳೆ ದಂಡ ಪಾವತಿಸಲು ವಿಫಲರಾದರೆ ಹೆಚ್ಚುವರಿ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಇದೇ ವೇಳೆ ನ್ಯಾಯಾಧೀಶರು ಮಹಿಳೆ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದ್ದರು.
ಪೀಥೋರ್ಗಢ ಅರಣ್ಯ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಮಹಿಳೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮಹಿಳೆಯನ್ನು ಪಿಥೋರ್ಗಢ ಜೈಲಿಗೆ ಸ್ಥಳಾಂತರಿಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : Pregnant Raped: ಹೆರಿಗೆಗೆ ಬಂದ ಏಳು ತಿಂಗಳ ಗರ್ಭಿಣಿ ಸಹೋದರಿ ಮೇಲೆ ಇಬ್ಬರು ಸಹೋದರರಿಂದ ಅತ್ಯಾಚಾರ