ಭೋಪಾಲ್ : ಯುವಕನ ಕುತ್ತಿಗೆಗೆ ಹಗ್ಗ ಕಟ್ಟಿ ನಾಯಿಯಂತೆ ಬೊಗಳಲು ಪೀಡಿಸಿದ ಘಟನೆ ಮಧ್ಯ ಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ನಡೆದಿದೆ. ಮೂವರು ಆರೋಪಿಗಳ ವಿರುದ್ಧ ತಿಲಾ ಜಮಾಲ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಸಂತ್ರಸ್ತ ಯುವಕ ವಿಜಯ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾನೆ. ರಾಜ್ಯದ ಗೃಹ ಸಚಿವರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಭೋಪಾಲ್ ಪೊಲೀಸ್ ಕಮಿಷನರ್‌ಗೆ 24 ಗಂಟೆಗಳೊಳಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಪ್ರತಿಕ್ರಿಯಿಸಿ, "ನಾನು ವಿಡಿಯೋ ನೋಡಿದ್ದೇನೆ. ಈ ರೀತಿಯ ವರ್ತನೆ ನಿಜಕ್ಕೂ ಖಂಡನೀಯ. ಪ್ರಕರಣದ ತನಿಖೆಗೆ ಭೋಪಾಲ್ ಪೊಲೀಸ್ ಕಮಿಷನರ್‌ಗೆ ಆದೇಶ ನೀಡಿದ್ದೇನೆ" ಎಂದು ತಿಳಿಸಿದ್ದಾರೆ.
ಸಮೀರ್, ಸಾಜಿದ್ ಮತ್ತು ಫೈಜಾನ್ ಎಂದು ಗುರುತಿಸಲಾದ ಮೂವರು ವ್ಯಕ್ತಿಗಳು ವಿಜಯ್ ಕುತ್ತಿಗೆಗೆ ಹಗ್ಗ ಕಟ್ಟಿದ್ದಾರೆ. ಆತನನ್ನು ಪ್ರಾಣಿಯಂತೆ ನಡೆಸಿಕೊಂಡಿದ್ದಾರೆ. ಕೈಯಲ್ಲಿ ಬೆಲ್ಟ್ ಹಿಡಿದಿದ್ದ ಕಿಡಿಗೇಡಿಗಳು ಯುವಕನಿಗೆ ಪ್ರಾಣ ಬೆದರಿಕೆ ಹಾಕಿದ್ದಾರೆ. ಘಟನೆಯನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿಯೂ ಪೋಸ್ಟ್ ಮಾಡಿದ್ದಾರೆ.
ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ: ಈ ಘಟನೆಗೆ ಸಾರ್ವಜನಿಕರು ಭಾರಿ ಆಕ್ರೋಶ ಹೊರಹಾಕಿದ್ದಾರೆ. ಬಜರಂಗದಳದ ಸದಸ್ಯರು ಜಮಾಲ್‌ಪುರ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿ, ಜೈ ಶ್ರೀ ರಾಮ್ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇನ್ನೊಂದೆಡೆ, ಆರೋಪಿಗಳ ಕುಟುಂಬಸ್ಥರು ಆರೋಪಗಳನ್ನು ನಿರಾಕರಿಸಿದ್ದಾರೆ.
ಕಾರಿನಲ್ಲಿ ಮಕ್ಕಳು ಶವವಾಗಿ ಪತ್ತೆ: ಮಹಾರಾಷ್ಟ್ರ ಜಿಲ್ಲೆಯ ಪಚ್ಪಾವಲಿ ಪೊಲೀಸ್ ಠಾಣೆ ವ್ಯಾಪ್ತಿಯ ಫಾರೂಕ್ ನಗರದಲ್ಲಿ ಮನೆಯ ಸಮೀಪದ ಕಾರಿನಲ್ಲಿ ಮಕ್ಕಳು ಶವವಾಗಿ ಪತ್ತೆಯಾಗಿರುವುದು ಕಂಡು ಬಂದಿದೆ. ಮೃತರನ್ನು ತೌಫಿಕ್ ಫಿರೋಜ್ ಖಾನ್ (4 ವರ್ಷ), ಅಲಿಯಾ ಫಿರೋಜ್ ಖಾನ್ (6 ವರ್ಷ) ಮತ್ತು ಆಫ್ರಿನ್ ಇರ್ಷಾದ್ ಖಾನ್ (6 ವರ್ಷ) ಎಂದು ಗುರುತಿಸಲಾಗಿದೆ. ಮೃತ ಮೂವರು ಮಕ್ಕಳು ಶನಿವಾರದಿಂದ ಕಾಣೆಯಾಗಿದ್ದರು. ನಾಪತ್ತೆಯಾದ 24 ಗಂಟೆಗಳ ಕಾಲ ಪೊಲೀಸ್ ಸಿಬ್ಬಂದಿ ಮಕ್ಕಳ ಪತ್ತೆಗಾಗಿ ಪ್ರಯತ್ನ ನಡೆಸಿದ್ದರು. ಆದರೂ ಪತ್ತೆಯಾಗಿರಲಿಲ್ಲ. ಕೊನೆಗೆ ಭಾನುವಾರ ಸಂಜೆ ಮೂವರು ಮಕ್ಕಳ ಶವ ಕಾರಿನಲ್ಲಿ ಪತ್ತೆಯಾಗಿರುವುದು ಕಂಡುಬಂದಿತ್ತು.
ಪೊಲೀಸ್ ಸಿಬ್ಬಂದಿ ವರದಿ ಪ್ರಕಾರ, ನಾಗ್ಪುರದ ಪಚ್ಪೋಲಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ತೌಫಿಕ್ ಫಿರೋಜ್ ಖಾನ್ (4), ಅಲಿಯಾ ಫಿರೋಜ್ ಖಾನ್ (6) ಮತ್ತು ಅಫ್ರಿನ್ ಇರ್ಷಾದ್ ಖಾನ್ (6) ಶನಿವಾರ ಸಂಜೆ ಮೂರು ಗಂಟೆಯಿಂದ ಕಾಣೆಯಾಗಿದ್ದರು. ಟೇಕಾ ನಾಕಾ ಪ್ರದೇಶದ ಫಾರೂಕ್ ನಗರ ಮೈದಾನದಲ್ಲಿ ಶನಿವಾರ ಮಧ್ಯಾಹ್ನದ ಸುಮಾರಿಗೆ ಮಕ್ಕಳು ಆಟವಾಡಲು ಹೋಗಿದ್ದರು. ಅದರ ನಂತರ ಅವರು ನಾಪತ್ತೆಯಾಗಿದ್ದರು. ರಾತ್ರಿಯಾದರೂ ಮಕ್ಕಳು ಹಿಂತಿರುಗದ ಕಾರಣ ಮನೆಯವರು ಠಾಣೆಯನ್ನು ಸಂಪರ್ಕಿಸಿದ್ದರು. ಸಿಬ್ಬಂದಿ ಅಪಹರಣ ಪ್ರಕರಣ ದಾಖಲಿಸಿಕೊಂಡು ಅವರಿಗಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು.
ಇದನ್ನೂ ಓದಿ: ಆಟವಾಡಲು ತೆರಳಿದ್ದ ಮೂವರು ಮಕ್ಕಳು.. ಕಾರಿನಲ್ಲಿ ಶವವಾಗಿ ಪತ್ತೆ!