ಜಾರ್ಖಂಡ್: ಭಾರತೀಯ ಸಂಪ್ರದಾಯದಂತೆ ಹಣೆಯ ಮೇಲೆ 'ಬಿಂದಿ' ಇಟ್ಟುಕೊಂಡು ಶಾಲೆಗೆ ಬಂದಿದ್ದ ವಿದ್ಯಾರ್ಥಿನಿಯನ್ನು ಶಿಕ್ಷಕ ಥಳಿಸಿದ ಕಾರಣ ಮನನೊಂದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಾರ್ಖಂಡ್‌ನ ಧನ್‌ಬಾದ್‌ನಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್‌ಸಿಪಿಸಿಆರ್) ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಅವರು ಮಂಗಳವಾರ ಈ ಕುರಿತು ಟ್ವೀಟ್ ಮಾಡಿದ್ದು, ವಿದ್ಯಾರ್ಥಿನಿಯೊಬ್ಬಳು 'ಬಿಂದಿ' ಧರಿಸಿ ಶಾಲೆಗೆ ಹೋಗಿದ್ದಕ್ಕಾಗಿ ಶಿಕ್ಷಕ ಕಪಾಳಮೋಕ್ಷ ಮಾಡಿದ್ದಾರೆ. ಶಿಕ್ಷಕನ ವರ್ತನೆಯಿಂದ ಮನನೊಂದ 10ನೇ ತರಗತಿ ವಿದ್ಯಾರ್ಥಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ. ಈ ವಿಷಯವನ್ನು ಎನ್‌ಸಿಪಿಸಿಆರ್ ಗಂಭೀರವಾಗಿ ತೆಗೆದುಕೊಂಡಿದೆ. ತನಿಖೆಗಾಗಿ ನಮ್ಮ ತಂಡ ಧನ್‌ಬಾದ್‌ಗೆ ತೆರಳಿದೆ ಎಂದು ತಿಳಿಸಿದ್ದಾರೆ.
ಧನ್‌ಬಾದ್‌ನ ಟೆತುಲ್ಮರಿ ಪ್ರದೇಶದಲ್ಲಿ ಸೋಮವಾರ ಘಟನೆ ನಡೆದಿದೆ. ಮಂಗಳವಾರ ಮೃತ ಬಾಲಕಿಯ ಪೋಷಕರು ಹಾಗೂ ಸ್ಥಳೀಯರು ಶಾಲಾ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದ್ದು, ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ವಿದ್ಯಾರ್ಥಿನಿ ಆತ್ಮಹತ್ಯೆ ಪತ್ರವನ್ನು ತನ್ನ ಸಮವಸ್ತ್ರದಲ್ಲಿ ಇಟ್ಟುಕೊಂಡಿದ್ದು ಪೊಲೀಸರಿಗೆ ದೊರೆತಿದೆ.
ಇದನ್ನೂ ಓದಿ : ಕ್ಷುಲ್ಲಕ ಕಾರಣಕ್ಕೆ ಜಗಳ, ಹಲ್ಲೆ: ಮನನೊಂದ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ
ಘಟನೆ ಬೆಳಕಿಗೆ ಬಂದ ನಂತರ ಶಾಲೆಯ ಪ್ರಾಂಶುಪಾಲ ಹಾಗೂ ಶಿಕ್ಷಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಜಾರ್ಖಂಡ್‌ನ ಧನ್‌ಬಾದ್ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಅಧ್ಯಕ್ಷ ಉತ್ತಮ್ ಮುಖರ್ಜಿ ಮಾಹಿತಿ ನೀಡಿದರು.
ಇದನ್ನೂ ಓದಿ : Bengaluru news: ಕಾಲೇಜು ಬಳಿ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ... ವಿದ್ಯಾರ್ಥಿ ಸಾವು
ಇದಕ್ಕೂ ಮುನ್ನ ರಾಜಸ್ಥಾನದ ಕೋಟಾದಲ್ಲಿ ಜಂಟಿ ಪ್ರವೇಶ ಪರೀಕ್ಷೆಗೆ (ಜೆಇಇ) ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕೋಟಾದ ಸರ್ಕಲ್ ಇನ್ಸ್‌ಪೆಕ್ಟರ್ ಆಫ್ ಪೊಲೀಸ್ (ಸಿಐ) ಪರಮ್‌ಜಿತ್ ಸಿಂಗ್ ಭಾನುವಾರ ತಿಳಿಸಿದ್ದಾರೆ.
ಇದನ್ನೂ ಓದಿ : ಪ್ರಥಮ ಪಿಯುಸಿಯಲ್ಲಿ ಎರಡು ಬಾರಿ ಫೇಲಾಗಿದ್ದಕ್ಕೆ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ
ಇನ್ನು ಪ್ರಥಮ ಪಿಯುಸಿಯಲ್ಲಿ ಎರಡು ಬಾರಿ ಫೇಲಾಗಿದ್ದಕ್ಕೆ ಮನನೊಂದು ವಿದ್ಯಾರ್ಥಿಯೊಬ್ಬ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಯ್ಯನಪಾಳ್ಯದಲ್ಲಿ ಜುಲೈ 6ರಂದು ನಡೆದಿದೆ. ಚಾರ್ಲಿ (17) ಆತ್ಮಹತ್ಯೆಗೆ ಶರಣಾದ ಯುವಕ.
10ನೇ ತರಗತಿ ಪಾಸಾಗಿ ತನ್ನ ಇಷ್ಟದ ಖಾಸಗಿ ಕಾಲೇಜಿಗೆ ಚಾರ್ಲಿ ಸೇರಿದ್ದ. ಆದರೆ ಓದು ತಲೆಗೆ ಹತ್ತದೇ ಆರು ತಿಂಗಳ ಹಿಂದೆ ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ. ಇದರಿಂದ ನೊಂದಿದ್ದ ಚಾರ್ಲಿಯನ್ನು ಅಪ್ಪ ಮತ್ತು ಅಣ್ಣ ಧೈರ್ಯ ತುಂಬಿ ಟ್ಯೂಷನ್ಗೆ ಕಳುಹಿಸಿದ್ದರು. ಬಳಿಕ, ಮತ್ತೊಮ್ಮೆ ಸಪ್ಲಿಮೆಂಟ್ರಿ ಪರೀಕ್ಷೆ ಬರೆದಾಗಲೂ ಚಾರ್ಲಿ ಫೇಲ್ ಆಗಿದ್ದಾನೆ. ಹೀಗಾಗಿ, ತಾನು ಓದುತ್ತಿದ್ದ ಕಾಲೇಜಿನವರು ಬೇರೆ ಕಾಲೇಜಿಗೆ ಹೋಗಿ ಎಂದು ಟಿಸಿ ಕೊಡಲು ಮುಂದಾಗಿದ್ದಾರೆ. ಇಷ್ಟವಾದ ಕಾಲೇಜಲ್ಲಿ ಓದೋಕೆ ಆಗ್ತಿಲ್ಲ ಎಂದು ಖಿನ್ನತೆಗೆ ಒಳಗಾಗಿದ್ದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ.