ಸಮಸ್ತಿಪುರ: ಬಿಹಾರದ ಸಮಸ್ತಿಪುರದಲ್ಲಿ ಅಹಿತಕರ ಘಟನೆಯೊಂದು ವರದಿಯಾಗಿದೆ. ಅಪರಾಧಿಗಳು ಮಗುವಿನ ಬಾಯಿಗೆ ಗುಂಡಿಕ್ಕಿ ಕೊಂದು ಹಾಕಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದು, ಪ್ರಕರಣದ ತನಿಖೆಯನ್ನೂ ಆರಂಭಿಸಿದ್ದಾರೆ. ಜಿಲ್ಲೆಯ ಬಿಥಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಹ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ಬಾಲಕನನ್ನು ಸಿಹಾಮ ನಿವಾಸಿ ವಿಪಿನ್ ಕುಮಾರ್ ಅವರ ಪುತ್ರ ಆರ್ಯನ್ ಕುಮಾರ್ (4) ಎಂದು ಗುರುತಿಸಲಾಗಿದೆ.
ಗುಂಡೇಟಿಗೆ ಉಸಿರು ಚಲ್ಲಿದ ಮಗು: ಮಗುವಿನ ಮೇಲೆ ಗುಂಡಿನ ದಾಳಿ ನಡೆಸಲು ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ತನಿಖೆಯ ಬಳಿಕವಷ್ಟೇ ಈ ಬಗ್ಗೆ ಗೊತ್ತಾಗಬೇಕಿದೆ. ಆದರೆ ಕುಟುಂಬಸ್ಥರು ಹೇಳುವ ಪ್ರಕಾರ ಆರ್ಯನ್ ಕುಮಾರ್ ಅಜ್ಜನ ಬಳಿ ಹೋಗುತ್ತಿದ್ದ ವೇಳೆ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಮಗುವಿನ ಬಾಯಿಗೆ ಗುಂಡು ಹಾರಿಸಿದ್ದಾರೆ. ಗುಂಡು ಹಾರಿಸಿದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಅತ್ತ ಬುಲೆಟ್ ತಗುಲಿದ ತಕ್ಷಣ ಮಗು ನೆಲಕ್ಕುರುಳಿದೆ.
ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ : ಯಾರೋ ದುಷ್ಕರ್ಮಿಗಳು ಮಗುವಿನ ಮೇಲೆ ಗುಂಡು ಹಾರಿಸಿ ಪರಾರಿ ಆಗುತ್ತಿದ್ದಂತೆ, ಇತ್ತ ಸದ್ದು ಕೇಳಿ ಹಾಗೂ ಮಗು ನೆಲಕ್ಕೆ ಬಿದ್ದ ತಕ್ಷಣ ಕುಟುಂಬಸ್ಥರು ತರಾತುರಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರಾದರೂ ಆಗಲೇ ಮಗುವಿನ ಪ್ರಾಣ ಹೋಗಿತ್ತು. ಮಗುವನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಇದಾದ ಬಳಿಕ ಆಸ್ಪತ್ರೆಯಲ್ಲಿಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಗ್ರಾಮಸ್ಥರ ಆಕ್ರೋಶ: ಘಟನೆ ಕುರಿತು ಮಾಹಿತಿ ಪಡೆದ ಬಿಥಾನ್ ಪೊಲೀಸ್ ಠಾಣೆಯ ಮುಖ್ಯಾಧಿಕಾರಿ ವಿಶಾಲ್ ಕುಮಾರ್ ಸಿಂಗ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಸೂಚಿಸಿದರು. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದ ದಿನಸಿ ಅಂಗಡಿಯೊಂದರ ಕುಟುಂಬಸ್ಥರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಪೊಲೀಸರು ವಿಚಾರಣೆ ಮುಂದುವರಿಸಿದ್ದು, ಕಾರಣ ಇನ್ನೂ ಪತ್ತೆಯಾಗಿಲ್ಲ. ಮತ್ತೊಂದು ಕಡೆ ಘಟನೆ ಬಳಿಕ ಗ್ರಾಮದ ಜನರಲ್ಲಿ ಭೀತಿ ಮೂಡಿದ್ದು, ಪ್ರಕರಣದ ಸಂಬಂಧ ಅವರೆಲ್ಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಲೆ ಬಗ್ಗೆ ಪೊಲೀಸ್ ಅಧಿಕಾರಿ ಹೇಳಿದ್ದಿಷ್ಟು; "ಸಂಬಂಧಿಗಳು ಕೊಲೆ ಬಗ್ಗೆ ಇನ್ನೂ ದೂರು ದಾಖಲಿಸಿಲ್ಲ. ಕುಟುಂಬದವರು ಬಂದು ದೂರು ಸಲ್ಲಿಸಿದಾಕ್ಷಣ ಎಫ್‌ಐಆರ್ ದಾಖಲಿಸಲಾಗುವುದು. ಕೊಲೆಗೆ ಕಾರಣ ತಿಳಿದುಬಂದಿಲ್ಲ. ತನಿಖೆ ನಡೆಸಲಾಗುತ್ತಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಬಿಥಾನ್ ಪೊಲೀಸ್ ಠಾಣೆ ಅಧಿಕಾರಿ, ವಿಶಾಲ್ ಕುಮಾರ್ ಸಿಂಗ್ ಹೇಳಿದ್ದಾರೆ.