ಆಗ್ರಾ (ಉತ್ತರ ಪ್ರದೇಶ): ಭಾರತೀಯ ಕ್ರಿಕೆಟ್ ಆಟಗಾರ ದೀಪಕ್ ಚಾಹರ್ ಅವರ ಪತ್ನಿ ಜಯಾ ಭಾರದ್ವಾಜ್ ಅವರಿಗೆ ವ್ಯವಹಾರದ ಹೆಸರಿನಲ್ಲಿ ಹತ್ತು ಲಕ್ಷ ರೂಪಾಯಿ ವಂಚಿಸಿದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಉತ್ತರ ಪ್ರದೇಶದ ಆಗ್ರಾದ ಪೊಲೀಸ್ ಠಾಣೆಗೆ ದೀಪಕ್ ತಂದೆ ಲೋಕೇಂದ್ರ ಚಾಹರ್ ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ದೂರಿನಲ್ಲಿ ಏನಿದೆ?: ದೀಪಕ್ ಚಹಾರ್ ಅವರ ಪತ್ನಿ ಜಯಾ ಭಾರದ್ವಾಜ್ ಅವರೊಂದಿಗೆ ಶೂ ಬ್ಯುಸಿನೆಸ್ನಲ್ಲಿ ಪಾಲುದಾರಿಕೆಯ ಒಪ್ಪಂದ ನೆಪದಲ್ಲಿ ಇಬ್ಬರು ಹತ್ತು ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾರೆ. ತೆಲಂಗಾಣದ ಹೈದರಾಬಾದ್ - ಸಿಕಂದರಾಬಾದ್ ಅವಳಿ ನಗರದ ನಿವಾಸಿ ಕಮಲೇಶ್ ಪಾರಿಖ್ ಮತ್ತು ಪುತ್ರ ಧ್ರುವ್ ಪಾರಿಖ್ ಇಬ್ಬರು ಸೇರಿಕೊಂಡು ವಂಚಿಸಿದ್ದಾರೆ ಎಂದು ಚಾಹರ್ ತಂದೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಕಮಲೇಶ್ ಮತ್ತು ಧ್ರುವ್ ಪಾರಿಖ್ ಸಿಕಂದರಾಬಾದ್‌ನ ಎಂಜಿ ರಸ್ತೆಯಲ್ಲಿ ಪಾರಿಖ್ ಸ್ಪೋರ್ಟ್ಸ್ ಎಂಬ ಸಂಸ್ಥೆ ಹೊಂದಿದ್ದಾರೆ. ಧ್ರುವ್ ಪಾರಿಖ್ ಮೂಲಕ ಅವರ ಕಮಲೇಶ್ ಪಾರಿಖ್ ಶೂ ವ್ಯಾಪಾರದಲ್ಲಿ ಪಾಲುದಾರಿಕೆ ಮಾಡುವ ಸಲುವಾಗಿ ಆನ್‌ಲೈನ್ ಕಾನೂನು ಒಪ್ಪಂದವನ್ನು ಮಾಡಿಕೊಂಡಿದ್ದರು. ಅದರಂತೆ, ಜಯಾ ಭಾರದ್ವಾಜ್ ನೆಟ್ ಬ್ಯಾಂಕಿಂಗ್ ಮೂಲಕ ಹತ್ತು ಲಕ್ಷ ರೂಪಾಯಿ ಪಾವತಿಸಿದ್ದರು. ಆದರೆ, ಇದಾದ ನಂತರ ಇದರ ಉದ್ದೇಶ ಬದಲಾಗಿದ್ದು, ಜಯಾ ಭಾರದ್ವಾಜ್ ಅವರಿಂದ ಹಣ ಪಡೆದು ಆರೋಪಿಗಳು ಕಬಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆರೋಪಿ ಕ್ರಿಕೆಟ್ ಸಂಸ್ಥೆಯ ಮಾಜಿ ಮ್ಯಾನೇಜರ್: ಆರೋಪಿ ಕಮಲೇಶ್ ಪಾರಿಖ್ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಮಾಜಿ ಮಾನ್ಯೇಜರ್ ಆಗಿದ್ದಾರೆ ಎಂದು ಲೋಕೇಂದ್ರ ಚಾಹರ್ ತಿಳಿಸಿದ್ದು, ಹತ್ತು ಲಕ್ಷ ರೂಪಾಯಿ ಹಣವನ್ನು ವಾಪಸ್ ನೀಡುವಂತೆ ಕೇಳಿದರೆ, ಕೆಟ್ಟಾಗಿ ನಿಂದಿಸಿ, ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ ಎಂದೂ ಆರೋಪಿಸಿದ್ದಾರೆ. ಇಲ್ಲಿನ ಹರಿಪರ್ವತ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಇದನ್ನು ಪೊಲೀಸ್ ಅಧಿಕಾರಿ ಅರವಿಂದ್ ಕುಮಾರ್ ಖಚಿತಪಡಿಸಿದ್ದಾರೆ. ಸದ್ಯ ದೂರಿನ ಮೇರೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರರಾದ ದೀಪಕ್ ಚಾಹರ್, 2021ರ ಅಕ್ಟೋಬರ್ 7ರಂದು ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ನಂತರ ತಮ್ಮ ಗೆಳತಿಯಾದ ಜಯಾ ಭಾರದ್ವಾಜ್ ಮುಂದೆ ಮದುವೆ ಪ್ರಸ್ತಾಪ ಮಾಡಿದ್ದರು. ನಂತರ 2022ರ ಜೂನ್ 2ರಂದು ಎರಡೂ ಕುಟುಂಬಗಳ ಪ್ರಮಖರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ತಮ್ಮ ಜೀವನದ ಹೊಸ ಅಧ್ಯಾಯ ಪ್ರಾರಂಭಿಸಿದ್ದರು. ಆಗ್ರಾದ ಶಹಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಮಾನಸ ಸರೋವರ ಕಾಲೋನಿಯಲ್ಲಿ ಚಾಹರ್ ಕುಟುಂಬಸ್ಥರು ವಾಸುತ್ತಿದ್ದಾರೆ.
ಇದನ್ನೂ ಓದಿ: ಸ್ನೇಹಿತನಿಂದಲೇ 44 ಲಕ್ಷ ರೂ ವಂಚನೆಗೆ ಒಳಗಾದ ಉಮೇಶ್ ಯಾದವ್