ನವದೆಹಲಿ: ಕೋವಿಡ್-19 ಗುಣಪಡಿಸುವ ಆ್ಯಂಟಿಬಾಡಿ ಕಾಕ್ಟೇಲ್ ಔಷಧಿಯ ಪ್ರಥಮ ಬ್ಯಾಚನ್ನು ಇಂದು ಭಾರತದಲ್ಲಿ ಬಿಡುಗಡೆಗೊಳಿಸಿರುವುದಾಗಿ ಜಾಗತಿಕ ಫಾರ್ಮಾ ಕಂಪನಿ ರೋಶ್ ಇಂಡಿಯಾ ಇಂದು ಘೋಷಿಸಿದೆ. ಕ್ಯಾಸಿರಿವಿಮ್ಯಾಬ್ ಹಾಗೂ ಇಮ್ಡೆವಿಮ್ಯಾಬ್ ಈ ಎರಡು ಔಷಧಿಗಳ ಕಾಕ್ಟೇಲ್ ಆಗಿರುವ ಈ ಆ್ಯಂಟಿಬಾಡಿ ಔಷಧಿಯ ಒಂದು ಡೋಸ್ ಬೆಲೆ ಭಾರತದಲ್ಲಿ ಪ್ರಸ್ತುತ 59,750 ರೂಪಾಯಿಗಳಾಗಿದೆ.
ಕಳೆದ ವರ್ಷ ಆಗಿನ ಅಮೆರಿಕ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಅವರಿಗೆ ಕೊರೊನಾ ಸೋಂಕು ತಗುಲಿದಾಗ ಇದೇ ಆ್ಯಂಟಿಬಾಡಿ ಔಷಧಿ ನೀಡುವ ಮೂಲಕ ಅವರನ್ನು ಗುಣಪಡಿಸಲಾಗಿತ್ತು.
"ಈ ಔಷಧಿಯ 1200 ಎಂಜಿ ಯ ಪ್ರತಿಯೊಂದು ಡೋಸ್ 600 ಎಂಜಿ ಕ್ಯಾಸಿರಿವಿಮ್ಯಾಬ್ ಮತ್ತು 600 ಎಂಜಿ ಇಮ್ಡೆವಿಮ್ಯಾಬ್ಗಳನ್ನು ಒಳಗೊಂಡಿದೆ. ಪ್ರತಿ ಡೋಸ್ ಬೆಲೆ 59,750 ರೂಪಾಯಿಗಳಾಗಿದ್ದು, ಎರಡು ಡೋಸಿನ ಪ್ಯಾಕೆಟ್ ಬೆಲೆ 1,19,500 ರೂಪಾಯಿಗಳಾಗಿದೆ. ಪ್ರತಿ ಪ್ಯಾಕ್ನಿಂದ ಇಬ್ಬರು ರೋಗಿಗಳಿಗೆ ಔಷಧ ನೀಡಬಹುದು." ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
ಭಾರತದಲ್ಲಿ ಸಿಪ್ಲಾ ಕಂಪನಿಯು ಈ ಔಷಧಿಯಲ್ಲಿ ಮಾರುಕಟ್ಟೆಯಲ್ಲಿ ಮಾರಲಿದ್ದು, ಔಷಧಿಯ ಎರಡನೇ ಬ್ಯಾಚ್ ಜೂನ್ ಮಧ್ಯದ ವೇಳೆಗೆ ಲಭ್ಯವಾಗಲಿದೆ.
"ಆ್ಯಂಟಿಬಾಡಿ ಕಾಕ್ಟೇಲ್ ಔಷಧಿಯ ಮೊದಲ ಬ್ಯಾಚ್ ಈಗ ಭಾರತದಲ್ಲಿ ಲಭ್ಯವಿದೆ. ಎರಡನೇ ಬ್ಯಾಚ್ ಜೂನ್ ಮಧ್ಯದ ವೇಳೆಗೆ ಬರಲಿದೆ. ಪ್ರತಿ ಬ್ಯಾಚಿನಲ್ಲಿ ಒಂದು ಲಕ್ಷ ಡೋಸ್ಗಳನ್ನು ಹೊಂದಿರುತ್ತದೆ. ಅಂದರೆ ಎರಡು ಬ್ಯಾಚಿನಿಂದ ಎರಡು ಲಕ್ಷ ರೋಗಿಗಳಿಗೆ ಚಿಕಿತ್ಸೆಯ ಲಾಭ ಸಿಗಲಿದೆ." ಎಂದು ಕಂಪನಿ ತಿಳಿಸಿದೆ.
ಔಷಧಿಯು ಪ್ರಖ್ಯಾತ ಆಸ್ಪತ್ರೆಗಳು ಹಾಗೂ ಕೋವಿಡ್ ಕೇರ್ ಸೆಂಟರ್ಗಳ ಮೂಲಕ ಲಭ್ಯವಾಗಲಿದೆ.
ಕೇಂದ್ರೀಯ ಔಷಧಿಗಳ ಗುಣಮಟ್ಟ ನಿಯಂತ್ರಣ ಪ್ರಾಧಿಕಾರವು (The Central Drugs Standards Control Organisation -CDSCO) ಭಾರತದಲ್ಲಿ ಈ ಔಷಧಿಯ ತುರ್ತು ಬಳಕೆಗೆ ಅನುಮತಿ ನೀಡಿದೆ.
ವಯಸ್ಕರು ಮತ್ತು ಮಕ್ಕಳ ರೋಗಿಗಳಲ್ಲಿ (12 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು, ಕನಿಷ್ಠ 40 ಕೆಜಿ ತೂಕವಿರುವ) ಸೌಮ್ಯ ಮತ್ತು ಮಧ್ಯಮ COVID-19 ಚಿಕಿತ್ಸೆಗಾಗಿ ಪ್ರತಿಕಾಯ ಕಾಕ್ಟೇಲ್ ಅನ್ನು ಬಳಸಲಾಗುತ್ತದೆ. ಸೋಂಕಿನ ಆರಂಭದಲ್ಲಿ ಈ ಔಷಧಿಯ ಬಳಕೆಯಿಂದ, ರೋಗಿಯು ಆಸ್ಪತ್ರೆಗೆ ದಾಖಲಾಗುವ ಮತ್ತು ಮಾರಣಾಂತಿಕ ಅಪಾಯವು ಶೇಕಡಾ 70 ರಷ್ಟು ಕಡಿಮೆಯಾಗುತ್ತದೆ.