ಚಂಡೀಗಢ (ಹರಿಯಾಣ) : ಕೊರೊನಾ ಸೋಂಕಿನಿಂದ ಬಳಲುತ್ತಿರುವ ಹರಿಯಾಣ ಆರೋಗ್ಯ ಸಚಿವರಾದ ಅನಿಲ್ ವಿಜ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಚಿಕಿತ್ಸೆಗಾಗಿ ಗುರುಗ್ರಾಮದಲ್ಲಿರುವ ಮೇದಾಂತ ಆಸ್ಪತ್ರೆಯ ಐಸಿಯುಗೆ ದಾಖಲಾಗಿದ್ದಾರೆ.
ಮೇದಾಂತ ಆಸ್ಪತ್ರೆಯ ಆಂತರಿಕ ವೈದ್ಯಕೀಯ ವಿಭಾಗದ ಹಿರಿಯ ನಿರ್ದೇಶಕರಾದ ಡಾ.ಸುಶೀಲಾ ಕಟಾರಿಯಾ ಅವರು ಅನಿಲ್ ವಿಜ್ಗೆ ಚಿಕಿತ್ಸೆ ನೀಡುತ್ತಿದ್ದು, ಶ್ವಾಸಕೋಶ ತೊಂದರೆಯಿಂದ ಸಚಿವರು ಬಳಸುತ್ತಿದ್ದಾರೆ ಎಂದು ಸುದ್ದಿ ಮೂಲಗಳು ವರದಿ ಮಾಡಿವೆ.
ಈ ಬಗ್ಗೆ ಇನ್ನೂ ಆಸ್ಪತ್ರೆಯಿಂದ ಯಾವುದೇ ನಿಖರ ಮಾಹಿತಿ ದೊರೆತಿಲ್ಲ. ಅನಿಲ್ ವಿಜ್ ಮಂಗಳವಾರ ಸಂಜೆ ಮೇದಾಂತ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ದೇಶದಲ್ಲಿ 26 ಸಾವಿರ ಹೊಸ ಸೋಂಕಿತರು ಪತ್ತೆ; ಉತ್ತರಾಖಂಡದ ಆರೋಗ್ಯ ಕಾರ್ಯದರ್ಶಿಗೆ ಕೊರೊನಾ
ಇದಕ್ಕೂ ಮೊದಲು ಅವರಿಗೆ ರೋಹ್ಟಕ್ನಲ್ಲಿರುವ ಆರೋಗ್ಯ ವಿಜ್ಞಾನಗಳ ಸ್ನಾತಕೋತ್ತರ ಕೇಂದ್ರ (ಪಿಜಿಐಎಂಎಸ್)ದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಶನಿವಾರ ಅವರಿಗೆ ಕೋವ್ಯಾಲ್ಸಂಟ್ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಲಾಗಿತ್ತು.
ಅನಿಲ್ ವಿಜ್ ಅವರಿಗೆ ಕೋವಿಡ್ ಸೋಂಕಿನ ಜೊತೆಗೆ ವೈರಲ್ ನ್ಯುಮೋನಿಯಾ ಕೂಡ ಇದೆ ಎಂದು ಆರೋಗ್ಯ ವಿಜ್ಞಾನಗಳ ಸ್ನಾತಕೋತ್ತರ ಕೇಂದ್ರ ಹೇಳಿಕೆ ನೀಡಿತ್ತು. ಆರೋಗ್ಯ ಸುಧಾರಿಸದ ಹಿನ್ನೆಲೆ ಸಚಿವರ ಕುಟುಂಬದವರು ಬೇರೊಂದು ಆಸ್ಪತ್ರೆಗೆ ಕಳಿಸುವಂತೆ ಒತ್ತಾಯಿಸಿದ ಕಾರಣದಿಂದ ಈಗ ಸದ್ಯಕ್ಕೆ ಅವರಿಗೆ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊವಾಕ್ಸಿನ್ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಹರಿಯಾಣದಲ್ಲಿ ಆರಂಭವಾದ ದಿನ (ನವೆಂಬರ್ 20)ರಂದು ರಾಜ್ಯ ಆರೋಗ್ಯ ಸಚಿವ ಅನಿಲ್ ವಿಜ್ ಮೊದಲ ಲಸಿಕೆ ಪ್ರಯೋಗ ನನ್ನ ಮೇಲೆಯೇ ಆಗಲಿ ಎಂದು ಸ್ವಯಂಪ್ರೇರಿತವಾಗಿ ಮೊದಲ ಡೋಸ್ ಹಾಕಿಸಿಕೊಂಡಿದ್ದರು.