ಅಮೃತಸರ: ಅಕ್ರಮ ಆಸ್ತಿ ಗಳಿಕೆ ಆರೋಪ ಹೊತ್ತಿರುವ ಪಂಜಾಬ್ನ ಮಾಜಿ ಉಪಮುಖ್ಯಮಂತ್ರಿ ಒಪಿ ಸೋನಿ ಅವರನ್ನು ಇಲ್ಲಿನ ನ್ಯಾಯಾಲಯ ಒಂದು ದಿನದ ಮಟ್ಟಿಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ಇದೊಂದು ರಾಜಕೀಯ ಪ್ರೇರಿತ ಬಂಧನ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರು ಕೋರ್ಟ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಡಿಸಿಎಂ ಅವರನ್ನು ಇಂದು ವಿಜಿಲೆನ್ಸ್ ಪಂಜಾಬ್ ಘಟಕ ಬಂಧಿಸಿತು. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಗಂಟೆಗಳ ಕಾಲ ನಡೆದ ವಿಚಾರಣೆಯ ಬಳಿಕ ಕೋರ್ಟ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಒಂದು ದಿನದ ಕಸ್ಟಡಿಗೆ ನೀಡಿ ಆದೇಶಿಸಿತು.
ಕೋರ್ಟ್ನಲ್ಲಿ ವಾದ ಮಂಡಿಸಿದ ಬಳಿಕ ಹೊರ ಬಂದ ಮಾಜಿ ಡಿಸಿಎಂ ಪರ ವಕೀಲ ಪ್ರದೀಪ್ ಸೈನಿ ಮಾಧ್ಯಮಗಳೊಂದಿಗೆ ಮಾತನಾಡಿ, ಒಪಿ ಸೋನಿ ಅವರ ವಿರುದ್ಧ ಕೇಳಿ ಬಂದಿರುವ ಅಕ್ರಮ ಆಸ್ತಿ ಆರೋಪ ಕಳೆದ 8 ತಿಂಗಳಿಂದ ನಡೆಯುತ್ತಿರುವ ತನಿಖೆಯಲ್ಲಿ ಸಾಬೀತಾಗಿಲ್ಲ. ಒಂದು ದಿನದ ವಿಚಾರಣೆಯಲ್ಲಿ ಏನು ಗೊತ್ತಾದೀತು. ಒಪಿ ಸೋನಿ ಅವರು ಜುಲೈ 12ರಂದು ಮತ್ತೆ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಎಂದು ತಿಳಿಸಿದರು.
ತಿಂಗಳುಗಳ ಬಳಿಕ ಬಂಧನ: ಮಾಜಿ ಡಿಸಿಎಂ ಸೋನಿ ಅವರ ವಿರುದ್ಧ ಇರುವ ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಕಳೆದ 8 ತಿಂಗಳಿನಿಂದ ತನಿಖೆ ನಡೆಸುತ್ತಿದ್ದಾರೆ. ಹಲವು ವಿಚಾರಣೆಗಳ ಹೊರತಾಗಿ ಅವರ ಬಂಧನವಾಗಿರಲಿಲ್ಲ. ಇಂದು ಅವರ ಮನೆ ಮೇಲೆ ದಾಳಿ ಮಾಡಿದ ಪೊಲೀಸರು ಬಂಧಿಸಿ ಕರೆದೊಯ್ದರು. ಇದು ರಾಜ್ಯದಲ್ಲಿ ರಾಜಕೀಯ ಕಿತ್ತಾಟಕ್ಕೆ ನಾಂದಿ ಹಾಡಿದೆ.
ಬೆಂಬಲಿಗರ ಪ್ರತಿಭಟನೆ: ಸೋನಿ ಅವರ ಬಂಧನ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಕೋರ್ಟ್ ಮುಂಭಾಗ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಆಪ್ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ. ಒ.ಪಿ. ಸೋನಿ ಪ್ರಾಮಾಣಿಕ ಸಚಿವರಾಗಿದ್ದರು. ಆದರೆ, ಸಿಎಂ ಭಗವಂತ್ ಮಾನ್ ಸರ್ಕಾರ ಅವರನ್ನು ಬಂಧಿಸಿದೆ. ಇದು ರಾಜಕೀಯ ಪ್ರೇರಿತ ಬಂಧನ ಎಂದು ಆರೋಪಿಸಿದರು. ಶೀಘ್ರದಲ್ಲಿಯೇ ಬಿಡುಗಡೆ ಮಾಡುವಂತೆ ಇದೇ ವೇಳೆ ಒತ್ತಾಯಿಸಿದರು.
ಒಂದು ದಿನದ ಕಸ್ಟಡಿಗೆ ಒಳಗಾಗಿರುವ ಮಾಜಿ ಡಿಸಿಎಂ ಸೋನಿ ಅವರು ನಾಡಿದ್ದು(ಜುಲೈ 12) ಮತ್ತೆ ಕೋರ್ಟ್ಗೆ ಹಾಜರಾಗಲಿದ್ದಾರೆ. ಮುಂದಿನ ವಿಚಾರಣೆಯಲ್ಲಿ ಒಪಿ ಸೋನಿ ಅವರ ವಿರುದ್ಧ ಮುಂದಿನ ಕ್ರಮ ಏನು ಎಂಬುದು ಸ್ಪಷ್ಟವಾಗಲಿದೆ.
ಇದನ್ನೂ ಓದಿ: ಮೋದಿ ಬಿಎ ಪದವಿ ಪ್ರಕರಣ: ಆರ್‌ಟಿಐ ಅರ್ಜಿ ತ್ವರಿತ ವಿಚಾರಣೆ ನಿರಾಕರಿಸಿದ ದೆಹಲಿ ಹೈಕೋರ್ಟ್