ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಪ್ರಧಾನಮಂತ್ರಿ ಕಚೇರಿಯಲ್ಲಿ ಹಿರಿಯ ಅಧಿಕಾರಿಯಂತೆ ವರ್ತಿಸಿದ್ದ ಹಾಗೂ ಕಾಶ್ಮೀರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹಿರಿಯ ಅಧಿಕಾರಿಗೆ ಸಿಗುವ ರಾಜ್ಯದ ಪ್ರೊಟೋಕಾಲ್ ಹಾಗೂ ಭದ್ರತೆಯನ್ನು ಅನುಭವಿಸಿದ ಗುಜರಾತ್‌ನ ವಂಚಕನೊಬ್ಬನಿಗೆ ಜಮ್ಮು ಹಾಗೂ ಕಾಶ್ಮೀರದ ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಧಾನ ಮಂತ್ರಿ ಕಚೇರಿಯಲ್ಲಿ ತಂತ್ರ ಮತ್ತು ಪ್ರಚಾರ ವಿಭಾಗದ ಹೆಚ್ಚವರಿ ನಿರ್ದೇಶಕನಾಗಿ ಪೋಸ್ ನೀಡಿದ್ದ ಗುಜರಾತ್ ನಿವಾಸಿಯಾಗಿರುವ ಕಿರಣ್ ಪಟೇಲ್ ಎಂಬಾತನನ್ನು ಮಾರ್ಚ್ 3 ರಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದರು. ಬಂಧನದಲ್ಲಿದ್ದ ಕಿರಣ್ ಪಟೇಲ್ನನ್ನು ಇಂದು ಶ್ರೀನಗರದ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಯಿತು. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿ ಆದೇಶ ಹೊರಡಿಸಿದರು ಎಂದು ಕಿರಣ್ ಪಟೇಲ್ ಪರ ವಕೀಲ್ ರಯ್ಯನ್ ಅಹ್ಮದ್ ತಿಳಿಸಿದ್ದಾರೆ.
ವಂಚಕ ಕಿರಣ್ ಪಟೇಲ್ ಜಮ್ಮು ಮತ್ತು ಕಾಶ್ಮೀರದ ಪಂಚತಾರಾ ಹೋಟೆಲ್ನಿಂದ ಬಂಧಿಸಲಾಗಿತ್ತು. ಆತನ ವಿರುದ್ಧ ಫೋರ್ಜರಿ ಹಾಗೂ ವಂಚನೆ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿತ ಅನೇಕ ವ್ಯಕ್ತಿಗಳನ್ನು ವಿಚಾರಣೆ ನಡೆಸಲಾಗಿದೆ. ಪ್ರಕರಣ ತನಿಖೆ ಹಂತದಲ್ಲಿದೆ. ತನಿಖೆ ಪೂರ್ಣಗೊಂಡ ನಂತರ ಈ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ವಂಚಕ ಕಿರಣ್ ಪಟೇಲ್ ವಿರುದ್ಧ ಗುಜರಾತ್‌ನ ವಿವಿಧ ಪೊಲೀಸ್ ಠಾಣೆಗಳಲ್ಲಿ ವಂಚನೆ ಆರೋಪದಡಿ ಈಗಾಗಲೇ ಮೂರು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಿಶೀಲನೆ ಮಾಡದೆ ವಂಚಕನಿಗೆ ಅಧಿಕಾರಿಗಳು ಕ್ಯಾವಲ್ಕೇಡ್ ಮಾಡಿದ್ದಕ್ಕೆ ಮತ್ತು ಝಡ್ ಪ್ಲಸ್ ಭದ್ರತೆಯನ್ನು ಒದಗಿಸಿದ್ದಕ್ಕಾಗಿ ಆಡಳಿತವು ತನ್ನ ಅಧಿಕಾರಿಗಳಿಗೆ ವಾಗ್ದಂಡನೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಪರಿಶೀಲಿಸಿದ ಟ್ವಿಟರ್ ಖಾತೆಯನ್ನು ಹೊಂದಿರುವ ಪಟೇಲ್ ಕಾಶ್ಮೀರದ ಗುಲ್ಮಾರ್ಗ್, ದೂಧಪತ್ರಿ ಮುಂತಾದ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದ ವೀಡಿಯೊಗಳು ಮತ್ತು ಚಿತ್ರಗಳನ್ನು ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾನೆ. ಈತ ಪ್ರಸಿದ್ಧ ಲಾಲ್‌ಚೌಕ್ ಮತ್ತು ಎಲ್‌ಒಸಿ ಬಳಿ ಪೊಲೀಸ್ ಹಾಗೂ ಸಿಆರ್ಪಿಎಫ್ ಭದ್ರತೆಯ ಜೊತೆಗೆ ನಿಂತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾನೆ. ವಂಚಕ ಕಿರಣ್ ಪಟೇಲ್ ಕಾಶ್ಮೀರದಲ್ಲಿ ಇಬ್ಬರು ಡೆಪ್ಯುಟಿ ಕಮಿಷನರ್ಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟ್ವಿಟರ್‌ನಲ್ಲಿ ಪಟೇಲ್ ನನ್ನು ಬಿಜೆಪಿ ಗುಜರಾತ್ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಸಿನ್ಹ್ ವಘೇಲಾ ಫಾಲೋ ಮಾಡುತ್ತಿದ್ದಾರೆ. ತನ್ನ ಟ್ವಿಟರ್ ಬಯೋದಲ್ಲಿ, ಪಟೇಲ್ ವರ್ಜೀನಿಯಾದ ಕಾಮನ್‌ವೆಲ್ತ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ, ಐಐಎಂ ತಿರುಚ್ಚಿಯಿಂದ ಎಂಬಿಎ, ಹಾಗೆಯೇ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಟೆಕ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಬಿಇ ಪದವಿ ಪಡೆದಿರುವುದಾಗಿ ಹೇಳಿಕೊಂಡಿದ್ದಾನೆ.
ಇದನ್ನೂ ಓದಿ: ಬೆಂಗಳೂರು: ಎಸ್ಪಿ ಸೋಗಿನಲ್ಲಿ ₹1.75 ಕೋಟಿ ವಂಚನೆ