ಕಿಯೋಂಝಾರ್ (ಒಡಿಶಾ): ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ 45 ವರ್ಷದ ವ್ಯಕ್ತಿ ಮತ್ತು ಅವರ ಪತ್ನಿಯನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿರುವ ಘಟನೆ ಮುನ್ನೆಲೆಗೆ ಬಂದಿದೆ. ಇವರಿಬ್ಬರು ವಾಮಾಚಾರ ನಡೆಸುತ್ತಿದ್ದಾರೆ ಎಂಬ ಶಂಕೆಯ ಮೇರೆಗೆ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಭಾನುವಾರ ಬೆಳಗ್ಗೆ ದೈತಾರಿ ಪೊಲೀಸ್ ಠಾಣೆ ವ್ಯಾಪ್ತಿಯ ರಸೂಲ್ ಜುಮುಕಿಪಾಟಿಯ ಸಾಹಿ ಗ್ರಾಮದ ದಂಪತಿ ವಾಸಿಸುತ್ತಿದ್ದ ಮನೆಯ ಹೊರಗೆ ರಕ್ತದ ಮಡುವಿನಲ್ಲಿ ಅವರ ಶವಗಳು ಪತ್ತೆಯಾಗಿವೆ. ಹತ್ಯೆಯ ಹಿಂದೆ ವಾಮಾಚಾರದ ಶಂಕೆ ಇದೆ ಎಂದು ತಿಳಿದುಬಂದಿದೆ. ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಕಿಯೋಂಜಾರ್ ಪೊಲೀಸ್ ವರಿಷ್ಠಾಧಿಕಾರಿ ಮಿತ್ರಭಾನು ಮಹಾಪಾತ್ರ ತಿಳಿಸಿದ್ದಾರೆ.
ಶನಿವಾರ ರಾತ್ರಿ ನಮ್ಮ ತಂದೆ ಬಹದಾ ಮುರ್ಮು ಮತ್ತು ತಾಯಿ ಧನಿ (35) ಮನೆಯ ಹೊರಗೆ ಮಲಗಿದ್ದರು. ನಾನು ಮನೆಯೊಳಗೆ ಮಲಗಿದ್ದೆ. ಕಿರುಚಾಟ ಕೇಳಿ ಹೊರಬಂದು ನೋಡಿದಾಗ ನನ್ನ ಪೋಷಕರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ನಾನು ನನ್ನ ಚಿಕ್ಕಪ್ಪ ಕಿಸಾನ್ ಮರಾಂಡಿಗೆ ಕರೆ ಮಾಡಿ ಘಟನೆ ಬಗ್ಗೆ ತಿಳಿಸಿದೆ ಎಂದು ದಂಪತಿಯ ಪುತ್ರಿ ಸಿಂಗೋ ಹೇಳಿದ್ದಾರೆ.
ರಾತ್ರಿ 12:30 ರ ಸುಮಾರಿಗೆ ಸಿಂಗೋದಿಂದ ನನಗೆ ಕರೆ ಬಂತು. ನಾನು, ನನ್ನ ಹಿರಿಯ ಮಗನೊಂದಿಗೆ ಬೈಕ್ನಲ್ಲಿ ಗ್ರಾಮಕ್ಕೆ ಬಂದೆವು ಎಂದು ಮರಾಂಡಿ ಹೇಳಿದರು. ಮಾಹಿತಿ ತಿಳಿದ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.