ಶ್ರೀಹರಿಕೋಟಾ, ಆಂಧ್ರಪ್ರದೇಶ: ಚಂದ್ರನನ್ನು ಅನ್ವೇಷಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಚಂದ್ರಯಾನ-3 (Chandrayaan-3) ಉಡಾವಣೆಗೆ ಸಜ್ಜಾಗಿದೆ. ತಿರುಪತಿ ಜಿಲ್ಲೆಯ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ (SDSC) ಎಂದರೆ ಶಾರ್ ಹೋಮ್ನಲ್ಲಿ ಇಂದು ಮಧ್ಯಾಹ್ನ 1.05ಕ್ಕೆ ಉಡಾವಣೆ ಪ್ರಕ್ರಿಯೆ ಆರಂಭವಾಗಿದೆ. ಈ ಕೌಂಟ್‌ಡೌನ್ ಸುಮಾರು 25.30 ಗಂಟೆಗಳ ಕಾಲ ನಡೆಯಲಿದೆ. LVM3-M4 ರಾಕೆಟ್ ಶುಕ್ರವಾರ ಮಧ್ಯಾಹ್ನ 2:35:13 ಕ್ಕೆ ಎರಡನೇ ಉಡಾವಣಾ ಕೇಂದ್ರದಿಂದ ಉಡಾವಣೆಗೊಳ್ಳಲಿದೆ.
ಚಂದ್ರಯಾನ ಸರಣಿಯಲ್ಲಿ ಇದು ಮೂರನೇ ಉಡಾವಣೆಯಾಗಿದೆ (India Moon Mission). LVM3 M4 ಹೆವಿ ಕ್ಯಾರಿಯರ್ ಉಪಗ್ರಹ ಮೂಲಕ ಈ ಪ್ರಯೋಗ ನಡೆಯುತ್ತಿದೆ. ಈ ಉಪಗ್ರಹವು ಲ್ಯಾಂಡರ್ ಮತ್ತು ರೋವರ್ ಪ್ರೊಪಲ್ಷನ್ ಮಾಡ್ಯೂಲ್‌ನೊಂದಿಗೆ ಸಂಪರ್ಕ ಹೊಂದಿದೆ. ಸುಮಾರು 3,84,000 ಕಿಮೀ ದೂರ ಪ್ರಯಾಣಿಸಿ ಚಂದ್ರನ ಮೇಲಿರುವ 100 ಕಿಲೋಮೀಟರ್ ಕಕ್ಷೆಯನ್ನು ತಲುಪಲಿದೆ. ಅದರ ನಂತರ, ಚಂದ್ರನ ದಕ್ಷಿಣ ಧ್ರುವದಲ್ಲಿ ಗೊತ್ತುಪಡಿಸಿದ ಸ್ಥಳದಲ್ಲಿ ಇಳಿಯಲಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಇದರಲ್ಲಿ ಆರ್ಬಿಟರ್ ಕಳುಹಿಸುತ್ತಿಲ್ಲವಂತೆ. ಚಂದ್ರಯಾನ 2 ರಲ್ಲಿ ಉಡಾವಣೆಯಾದ ಆರ್ಬಿಟರ್ ಚಂದ್ರನ ಸುತ್ತ ಸುತ್ತುತ್ತಿದೆ. ಈಗ ಅದನ್ನೇ ಬಳಸಲಾಗುತ್ತಿದೆ ಎಂದು ಇಸ್ರೋ ಬಹಿರಂಗಪಡಿಸಿದೆ.
ಮೂನ್ ಮಿಷನ್‌ನಲ್ಲಿ ಸಾಫ್ಟ್ ಲ್ಯಾಂಡಿಂಗ್‌ಗೆ ಈ ಬಾರಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಇಸ್ರೋ ಈಗಾಗಲೇ ಬಹಿರಂಗಪಡಿಸಿದೆ. ಹಿಂದಿನ ವೈಫಲ್ಯವನ್ನು ವಿಶ್ಲೇಷಿಸಿ ಮತ್ತು ಅದನ್ನು ನಿವಾರಿಸಿ (ವೈಫಲ್ಯ ಆಧಾರಿತ ವಿನ್ಯಾಸ) ಚಂದ್ರಯಾನ-3 ಅನ್ನು ವಿನ್ಯಾಸಗೊಳಿಸಲಾಗಿದೆ. ಅನಿರೀಕ್ಷಿತ ಸಮಸ್ಯೆಯ ನಡುವೆಯೂ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯಿತು ಎಂದು ಇಸ್ರೋ ಹೇಳಿದೆ. ಈ ಬಾರಿ ಲ್ಯಾಂಡಿಂಗ್ ಗುರಿಯಾಗಿ ವಿಶಾಲ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಇಸ್ರೋ ತಿಳಿಸಿದೆ. ಚಂದ್ರಯಾನ-3 ಅನ್ನು ಇಂಧನದಿಂದ ಹೆಚ್ಚಿಸಲಾಗಿದ್ದು, ಅಗತ್ಯವಿದ್ದರೆ ಪರ್ಯಾಯ ಲ್ಯಾಂಡಿಂಗ್ ಸೈಟ್ ಅನ್ನು ತಲುಪಬಹುದು ಎಂದು ಇಸ್ರೋ ಹೇಳಿದೆ.
ಚಂದ್ರಯಾನ-3 ಮಿಷನ್‌ನ ಉಡಾವಣೆಗೆ ಅನುಕೂಲವಾಗುವಂತೆ ಇಸ್ರೋ ಜಿಎಸ್ಎಲ್ವಿ (GSLV) ಮಾರ್ಕ್ III ಎಂದೂ ಕರೆಯಲ್ಪಡುವ ಲಾಂಚ್ ವೆಹಿಕಲ್ ಮಾರ್ಕ್-III (LVM-3) ಅನ್ನು ಬಳಸಿಕೊಳ್ಳುತ್ತಿದೆ. ಇಸ್ರೋ ಅಭಿವೃದ್ಧಿಪಡಿಸಿದ ಎಲ್ವಿಎಂ -3 ಸಂಸ್ಥೆಯ ಫ್ಲೀಟ್‌ನಲ್ಲಿ ಅತ್ಯಂತ ಶಕ್ತಿಶಾಲಿ ರಾಕೆಟ್ ಆಗಿದೆ. 4 ಮೀಟರ್ ವ್ಯಾಸದೊಂದಿಗೆ 43.5 ಮೀಟರ್ ಎತ್ತರ ಇರುವ ಇದು 640 ಟನ್ ತೂಕವನ್ನು ಎತ್ತುವ ಸಾಮರ್ಥ್ಯವನ್ನು ಹೊಂದಿದೆ.
ಇಲ್ಲಿಯವರೆಗೆ, ಅಮೆರಿಕ, ರಷ್ಯಾ ಮತ್ತು ಚೀನಾ ತಮ್ಮ ಬಾಹ್ಯಾಕಾಶ ನೌಕೆಯನ್ನು ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿಸಿವೆ. ಈ ಮೈಲಿಗಲ್ಲು ಸಾಧಿಸಿದ ನಾಲ್ಕನೇ ರಾಷ್ಟ್ರವಾಗಲು ಭಾರತ ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ, ಚಂದ್ರನ ದಕ್ಷಿಣ ಧ್ರುವವನ್ನು ಕಂಡುಹಿಡಿಯುವ ಉದ್ದೇಶದಿಂದ 2019 ರಲ್ಲಿ ಚಂದ್ರಯಾನ-2 (ಚಂದ್ರಯಾನ-3) ಅನ್ನು ಉಡಾವಣೆ ಮಾಡಲಾಯಿತು. ಆದಾಗ್ಯೂ, ಚಂದ್ರನ ಮೇಲ್ಮೈ ಮೇಲೆ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗುವಲ್ಲಿ ವಿಫಲವಾಗಿತ್ತು. ಈ ಹಿಂದೆ.. 2008 ರಲ್ಲಿ ಚಂದ್ರಯಾನ-1 (ಲ್ಯಾಂಡರ್ ಇಲ್ಲದೇ ಆರ್ಬಿಟರ್ ಮತ್ತು ಇಂಪ್ಯಾಕ್ಟರ್ನೊಂದಿಗೆ ಪ್ರಯತ್ನ) ಕೈಗೊಳ್ಳಲಾಗಿತ್ತು. ಚಂದ್ರಯಾನ 3 ಮಿಷನ್ ಯಶಸ್ವಿಯಾದರೆ ಭಾರತದ ಬಾಹ್ಯಾಕಾಶ ಸಂಶೋಧನೆಯಲ್ಲಿ ಮಹತ್ವದ ಹೆಜ್ಜೆ ಇಟ್ಟಂತಾಗುತ್ತದೆ.
ಉಡಾವಣೆ ವೀಕ್ಷಣೆಗೆ ಅವಕಾಶ: ಬಹುನಿರೀಕ್ಷಿತ ಹಾಗೂ ಮಹತ್ವಾಕಾಂಕ್ಷೆಯ ಚಂದ್ರಯಾನ 3 ಮಿಷನ್ ಉಡಾವಣೆ ವೀಕ್ಷಣೆಗೆ ಸಾರ್ವಜನಿಕರಿಗೆ ಇಸ್ರೋ ಅವಕಾಶ ಕಲ್ಪಿಸಿತ್ತು. ಇದಕ್ಕಾಗಿ ಹೆಸರು ನೋಂದಾಯಿಸಲು ಹೇಳಿ ಲಿಂಕ್ ಸಹ ನೀಡಿತ್ತು. ಶ್ರೀಹರಿಕೋಟಾದ ಲಾಂಚ್ ವ್ಯೂ ಗ್ಯಾಲರಿಯಿಂದ ಉಡಾವಣೆ ವೀಕ್ಷಿಸಲು ಹೆಸರು ನೋಂದಾಯಿಸಿ ಎಂದು ಇಸ್ರೋ ಟ್ವೀಟ್ ಮಾಡಿತ್ತು.
ಓದಿ: Chandrayaan 3: ಚಂದ್ರಯಾನ ಉಡ್ಡಯನಕ್ಕೆ ಕ್ಷಣಗಣನೆ; ತಿರುಪತಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ ವಿಜ್ಞಾನಿಗಳ ತಂಡ