ಬೀಜಿಂಗ್(ಚೀನಾ): ಮಾರಕ ಕೊರೊನಾ ಪತ್ತೆಯಾದರೂ ಅದನ್ನು ವಿಶ್ವಕ್ಕೆ ಬೇಗನೆ ತಿಳಿಸದೇ ಮುಚ್ಚಿಟ್ಟಿದ್ದ ಚೀನಾ ಇದೀಗ ಬೀಜಿಂಗ್ ಒಲಿಂಪಿಕ್ಸ್ಗಾಗಿ ದೇಶಾದ್ಯಂತ ಕಠಿಣ ಕ್ರಮಗಳನ್ನು ಜಾರಿ ಮಾಡಲು ಮುಂದಾಗಿದೆ.
ಮುಂದಿನ ವರ್ಷದ ಫೆಬ್ರವರಿಯಲ್ಲಿ ಬೀಜಿಂಗ್ನಲ್ಲಿ ಒಲಂಪಿಕ್ಸ್ ಕ್ರೀಡಾಕೂಟ ಆಯೋಜನೆಯಾಗಿದ್ದು, ಅದರ ಸಿದ್ಧತೆ ನಡೆಸಿರುವ ಚೀನಾ ಸರ್ಕಾರ ಕೊರೊನಾ ಕಾಣಿಸಿಕೊಳ್ಳುತ್ತಿರುವ ನಗರ, ಪ್ರಾಂತ್ಯಗಳಲ್ಲಿ ಬಿಗಿ ನಿರ್ಬಂಧಗಳನ್ನು ಹೇರಿದೆ. ಅದರಂತೆ ಇದೀಗ ಕ್ಸಿಯಾನ್ ನಗರದಲ್ಲಿ ಕೊರೊನಾ ಹೊಸ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವ ಕಾರಣ ನಗರದ ಜನರನ್ನು ಅಗತ್ಯ ಸಂದರ್ಭ ಹೊರತುಪಡಿಸಿ ಮನೆಯಿಂದ ಹೊರಬಾರದಂತೆ ಸೂಚಿಸಿದೆ.
ಇದು ಮೊದಲ ಬಾರಿಗೆ ವುಹಾನ್ನಲ್ಲಿ ಕೊರೊನಾ ಕಾಣಿಸಿಕೊಂಡಾಗ ಹೇರಿದ ನಿರ್ಬಂಧಕ್ಕಿಂತಲೂ ಕಠಿಣವಾಗಿದೆ ಎಂದ ಹೇಳಲಾಗಿದೆ. ಉತ್ತರ ಚೀನಾದ ಕ್ಸಿಯಾನ್ನಲ್ಲಿ ಬುಧವಾರವಷ್ಟೇ 52 ಹೊಸ ಕೊರೊನಾ ಕೇಸ್ ದಾಖಲಾಗಿವೆ. ಹೀಗಾಗಿ ಕೊರೊನಾ ಪ್ರಸರಣವನ್ನು ತಡೆಗಟ್ಟಲು ಚೀನಾ ಸರ್ಕಾರ ಅಲ್ಲಿನ 13 ಮಿಲಿಯನ್ ಜನರ ಮೇಲೆ ನಿರ್ಬಂಧಗಳನ್ನು ಹೇರಿದೆ.
ಸರ್ಕಾರ ವಿಧಿಸಿದ ಕಠಿಣ ನಿಯಮಗಳೇನು?
ಜನರು ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಹೊರಬರಬೇಕಿದ್ದು, ಕುಟುಂಬದ ಒಬ್ಬ ಸದಸ್ಯ ಮಾತ್ರ ಓಡಾಡಲು ಅನುಮತಿ ನೀಡಲಾಗಿದೆ. ಇದಲ್ಲದೇ, ಅಗತ್ಯ ವಸ್ತುಗಳ ಖರೀದಿಗೆ 2 ದಿನಗಳಿಗೊಮ್ಮೆ ಅವಕಾಶ ನೀಡಲಾಗಿದೆ. ತುರ್ತು ಸಂದರ್ಭ ಹೊರತುಪಡಿಸಿ ಜನರು ಹೊರಬರುವ ಹಾಗಿಲ್ಲ.
ತುರ್ತು ಸಂಚಾರಕ್ಕಾಗಿ ಅಗತ್ಯ ದಾಖಲೆಯನ್ನು ಕಡ್ಡಾಯವಾಗಿ ತೋರಿಸಬೇಕು. ಅನಗತ್ಯವಾಗಿ ನಗರವನ್ನು ತೊರೆಯದಂತೆ ಆದೇಶಿಸಲಾಗಿದೆ ಎಂದು ಅಲ್ಲಿನ ಸ್ಥಳೀಯ ಆಡಳಿತದ ವೆಬ್ಸೈಟ್ ಪ್ರಕಟಿಸಿದೆ.
ಇದಲ್ಲದೇ ಕೊರೊನಾ ಪ್ರಸರಣವನ್ನು ತೀವ್ರವಾಗಿ ಹತ್ತಿಕ್ಕಲು 13 ಮಿನಿಯನ್ ಜನರನ್ನು ಪರೀಕ್ಷಿಸಲು ಸರ್ಕಾರ ಮುಂದಾಗಿದೆ. ದೂರದ ಬಸ್ ಸಂಚಾರ ನಿರ್ಬಂಧಿಸಿದೆ. ಕ್ಸಿಯಾನ್ ರಸ್ತೆಗಳಲ್ಲಿ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಸೂಚಿಸಿದೆ. ಇದಲ್ಲದೇ ನಗರದ ವಿಮಾನ ನಿಲ್ದಾಣವನ್ನೂ ಮುಚ್ಚಲಾಗಿದ್ದು, ಹೊರ ಹೋಗುವ ಮತ್ತು ಒಳಬರುವ ಎಲ್ಲಾ ವಿಮಾನಗಳನ್ನು ಬಂದ್ ಮಾಡಲಾಗಿದೆ. ಬಸ್, ರೈಲು ಸಂಚಾರವನ್ನು ಕಡಿತಗೊಳಿಸಿದ್ದು, ಶಾಲೆಗಳನ್ನು ಕೂಡ ಮುಚ್ಚಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಇಂದು 12 ಒಮಿಕ್ರಾನ್ ದೃಢ: ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ
ಸೂಪರ್ ಮಾರ್ಕೆಟ್‌ಗಳು, ಅಂಗಡಿಗಳು ಮತ್ತು ವೈದ್ಯಕೀಯ ಸಂಸ್ಥೆಗಳನ್ನು ಹೊರತುಪಡಿಸಿ ಅನಿವಾರ್ಯವಲ್ಲದ ವ್ಯವಹಾರಗಳು ಮತ್ತು ಸಾರ್ವಜನಿಕ ಸೌಲಭ್ಯಗಳನ್ನು ಬಂದ್ ಮಾಡಲು ಆದೇಶಿಸಿದೆ. ಇದಲ್ಲದೇ, ಕೆಲಸಗಾರರು ಮನೆಯಿಂದಲೇ(ವರ್ಕ್ ಫ್ರಂ ಹೋಮ್) ಕೆಲಸ ಮಾಡಲು ಸೂಚಿಸಿದೆ ಎಂದು ಅಲ್ಲಿನ ಸಿಸಿಟಿವಿ ವರದಿ ಮಾಡಿದೆ.
ಇದಲ್ಲದೇ, ದಕ್ಷಿಣ ಚೀನಾದ ನಗರವಾದ ಡಾಂಗ್ಸಿಂಗ್ನಲ್ಲೂ ಸೋಂಕು ಪ್ರಕರಣಗಳು ಪತ್ತೆಯಾದ ಕಾರಣ ಮಂಗಳವಾರ ಅಲ್ಲಿನ 2 ಲಕ್ಷ ನಿವಾಸಿಗಳನ್ನು ಮನೆಯಲ್ಲಿಯೇ ಪ್ರತ್ಯೇಕಿಸಲು ಆದೇಶಿಸಿದೆ.