ಬೆಂಗಳೂರು: ಸರ್ಕಾರದ ಬಿಗಿ ಕ್ರಮ ಘೋಷಣೆ ಹಿನ್ನಲೆಯಲ್ಲಿ ರಾಜಧಾನಿ ತೊರೆಯುವವರ ಸಂಖ್ಯೆ ಹೆಚ್ಚಳವಾಗಿದ್ದು, ತತ್ಪರಿಣಾಮ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಅನಿರೀಕ್ಷಿತ ಬೇಡಿಕೆ ಸೃಷ್ಟಿಯಾಗಿದೆ.
ಸಾರಿಗೆ ಮುಷ್ಕರದ ನಂತರ ಕಳೆದೊಂದು ವಾರದಿಂದ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಪ್ರಯಾಣಿಕರ ಸಂಖ್ಯೆ ಕುಸಿತವಾಗಿತ್ತು. ಇಂದೂ ಭಾರೀ ಪ್ರಯಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಬೆಳಗ್ಗೆಯಿಂದಲೇ ಬೆಂಗಳೂರು ನಗರದಿಂದ ರಾಜ್ಯದ ವಿವಿಧ ಸ್ಥಳಗಳಿಗೆ ಸಂಚರಿಸುವ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು.
ಚಿಕ್ಕಮಗಳೂರು, ಮಂಗಳೂರು, ಶಿವಮೊಗ್ಗ, ಮಡಿಕೇರಿ ಹಾಗೂ ತಿರುಪತಿ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳು ಶೇ 100ರಷ್ಟು ಭರ್ತಿಯಾಗಿದ್ದವು. ಮೈಸೂರು, ಶಿವಮೊಗ್ಗ, ದಾವಣಗೆರೆ ಮಾರ್ಗದಲ್ಲಿ ಸಂಚರಿಸುವ ನಿಗದಿತ ಬಸ್‌ಗಳು ಭರ್ತಿಯಾಗಿದ್ದು, ಈ ಮಾರ್ಗಗಳಲ್ಲಿ ಹೆಚ್ಚುವರಿ ಬಸ್‌ಗಳ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.
ಬಿಗಿ ಕ್ರಮ ಘೋಷಣೆ ಬೆನ್ನಲ್ಲೇ ದಿನಸಿ ಖರೀದಿಗೆ ಮುಗಿಬಿದ್ದ ಜನ
ಬೆಳಗಾವಿ: ಸಿಎಂ ಬಿಎಸ್ ಯಡಿಯೂರಪ್ಪ ನಾಳೆಯಿಂದ 14 ದಿನ ಬಿಗಿ ಕ್ರಮಗಳ ಆದೇಶ ಘೋಷಿಸುತ್ತಿದ್ದಂತೆ ಬೆಳಗಾವಿ ಜಿಲ್ಲೆಯ ಜನರು ದಿನಸಿ ಖರೀದಿಗೆ ಮುಗಿಬಿದ್ದರು.
ಸಂಜೆ ವೇಳೆಗೆ ಮಾರುಕಟ್ಟೆಗಳು ಜನದಟ್ಟಣೆಯಿಂದ ಕೂಡಿತ್ತು. ನೆಹರು ನಗರದ ಚಿಲ್ಲರೆ ಮಳಿಗೆ ಮಾಲ್ ಮುಂದೆ ದಿನಸಿ ವಸ್ತುಗಳ ಕೊಳ್ಳಲು ಜನರು ಸರದಿ ಸಾಲಿನಲ್ಲಿ ನಿಂತಿದ್ದು ಸಾಮಾನ್ಯವಾಗಿತ್ತು. ಜನರನ್ನು ನಿಯಂತ್ರಿಸಲು ಮಾಲ್ ಸಿಬ್ಬಂದಿ ಹೈರಾಣಾದರು. ಸಿಎಂ ಅವರ ಬಿಗಿ ಕ್ರಮದ ಘೋಷಣೆಯಿಂದ ಕಿರಾಣಿ ಅಂಗಡಿಗಳಲ್ಲಿ ದಿನಸಿ ವಸ್ತುಗಳ ದರ ದುಪ್ಪಟ್ಟಾಗುವ ಆತಂಕದಿಂದ ಜನರು ಖರೀದಿಗೆ ಮುಗಿಬಿದ್ದರು.
ಖಡೇಬಜಾರ್, ಗಣಪತಿ ಗಲ್ಲಿ, ಸಮಾದೇವಿ ಗಲ್ಲಿಯಲ್ಲಿ ಜನರ ಓಡಾಟ ಹೆಚ್ಚಾಗಿತ್ತು. ವಸ್ತುಗಳ ಖರೀದಿಗೆ ಜನರು ಮಾರುಕಟ್ಟೆಗೆ ದೌಡಾಯಿಸಿದ್ದರು. ಕೆಲವರು ಮಾಸ್ಕ್ ಧರಿಸಿದ್ದರೂ ಸಾಮಾಜಿಕ ಅಂತರ ಮರೆತು ಓಡಾಡುತ್ತಿದ್ದರು.
ಸರ್ಕಾರಿ ಕಚೇರಿಗಳ ಕಾರ್ಯಸ್ಥಗಿತ; ಕಡತ ವಿಲೇವಾರಿಗೆ ತೊಡಕು
ಬೆಂಗಳೂರು: ಕೋವಿಡ್ ಎರಡನೇ ಅಲೆ ಮೊದಲಿಗಿಂತಲೂ ವೇಗವಾಗಿ ರಾಜ್ಯಾದ್ಯಂತ ಹಬ್ಬುತ್ತಿದ್ದು, ಬಹುತೇಕ ಆಡಳಿತ ಯಂತ್ರ ಸೋಂಕು ನಿಯಂತ್ರಣ ಹೇರುವ ಕಾರ್ಯದಲ್ಲಿ ಮಗ್ನವಾಗಿದೆ. ಮುಂಜಾಗ್ರತಾ ಕ್ರಮವಾಗಿ ಸರ್ಕಾರಿ ಕಚೇರಿಗಳಲ್ಲಿ ಶೇ 50ರಷ್ಟು ಸಿಬ್ಬಂದಿಗೆ ಅವಕಾಶವಿದೆ. ಈಗಾಗಲೇ ಕುಂಟುತ್ತಾ ಸಾಗುತ್ತಿದ್ದ ಕಡತ ವಿಲೇವಾರಿಗೆ ಅಕ್ಷರಶಃ ಗ್ರಹಣ ಹಿಡಿಯಲಿದೆ.