ಕುಲ್ಟಿ: ಅಸನ್ಸೋಲ್‌ನ ಕುಲ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿನಕುಡಿ ಎಂಬಲ್ಲಿ ಬುಧವಾರ ಬೆಳಗ್ಗೆ ಯಾರೋ ದುಷ್ಕರ್ಮಿಗಳು ಗುತ್ತಿಗೆದಾರನೊಬ್ಬನನ್ನು ಗುಂಡಿಕ್ಕಿ ಕೊಂದಿದ್ದಾರೆ. ಶಂಭುನಾಥ್ ಮಿಶ್ರಾ (55) ಗುಂಡಿಗೆ ಬಲಿಯಾದ ಗುತ್ತಿಗೆದಾರ. ಆಸ್ಪತ್ರೆಗೆ ಕರೆತರುತ್ತಿದ್ದಾಗ ಶಂಭುನಾಥ್ ದಾರಿ ಮಧ್ಯೆಯೇ ಮೃತಪಟ್ಟಿರುವುದಾಗಿ ಅಸನ್ಸೋಲ್ ಜಿಲ್ಲಾ ಆಸ್ಪತ್ರೆಯ ವೈದ್ಯರು ಖಚಿತಪಡಿಸಿದ್ದಾರೆ. ಅವರ ದೇಹದ ತುಂಬಾ ಗುಂಡುಗಳು ಹೊಕ್ಕಿದ್ದು ಈ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಗುಂಡಿನ ಮೊರೆತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.
ಕುಲ್ಟಿಯ ಚಿನಕುಡಿ ಏರಿಯಾ ನಂಬರ್ 3 ನಿವಾಸಿಯಾಗಿರುವ ಶಂಭುನಾಥ್, ಸ್ವಂತ ವ್ಯವಹಾರ ನಡೆಸುತ್ತಿದ್ದರು. ವ್ಯವಹಾರದ ಜೊತೆಗೆ ಅವರು ವಿವಿಧ ಕಂಪನಿಗಳಲ್ಲಿ ಗುತ್ತಿಗೆದಾರರಾಗಿಯೂ ಕೆಲಸ ಮಾಡುತ್ತಿದ್ದರು. ನಿತ್ಯ ಬೆಳಗ್ಗೆ 7 ಗಂಟೆಗೆ ಮನೆಯಿಂದ ಹೊರಟು ಸಂಜೆ ಮನೆಗೆ ಬರುತ್ತಿದ್ದರು. ಅದೇ ರೀತಿ ಬುಧವಾರ ಬೆಳಗ್ಗೆ ಮನೆಯಿಂದ ಹೊರಗೆ ಹೋಗಿ ಮನೆಯ ಸಮೀಪದ ಟೀ ಸ್ಟಾಲ್‌ನಲ್ಲಿ ನಿಂತು ಚಹಾ ಸೇವಿಸುತ್ತಿದ್ದರು. ಈ ವೇಳೆ ಟೀ ಅಂಗಡಿಯತ್ತ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಪಾಯಿಂಟ್-ಬ್ಲಾಂಕ್ ರೇಂಜ್ನಿಂದ ಅವರ ಮೇಲೆ ಸರಣಿ ಗುಂಡು ಹಾರಿಸಿದ್ದಾರೆ. ಅವರ ಮೇಲೆ ಸುಮಾರು 6 ಸುತ್ತು ಗುಂಡು ಹಾರಿಸಿರುವ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ನೋಡಿದ್ದಾರೆ. ಈ ಪ್ರಮಾಣದಲ್ಲಿ ಗುಂಡು ಹಾರಿಸಿ ಕೊಲೆ ಮಾಡಲು ಕಾರಣ ಗೊತ್ತಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮೃತ ವ್ಯಕ್ತಿಯ ಸಂಬಂಧಿಕರು ಮಾಹಿತಿ ನೀಡಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಕುಲ್ಟಿ ಪೊಲೀಸ್ ಠಾಣೆಯ ನಿಯಾಮತ್‌ಪುರ ಹೊರಠಾಣೆಯ ಪೊಲೀಸರು ಅಲ್ಲಿಗೆ ಬಂದು ಗುಂಡಿನ ದಾಳಿಗೊಳಗಾದ ಶಂಭುನಾಥ ಅವರನ್ನು ಅಸನ್ಸೋಲ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಆದರೆ, ದಾರಿ ನಡುವೆ ಅವರು ಕೊನೆಯುಸಿರೆಳೆದಿದ್ದರು.
"ಶಂಭುನಾಥ್ನ ದೇಹದ ಮೂರು ಕಡೆಗಳಲ್ಲಿ ಗುಂಡು ಹೊಕ್ಕಿವೆ. ಒಂದು ತಲೆಗೆ, ಒಂದು ಮೂತ್ರಪಿಂಡದಲ್ಲಿ, ಮತ್ತೊಂದು ಕೈಯಲ್ಲಿ ಗುಂಡಿನ ಗಾಯಗಳಾಗಿವೆ. ಯಾರೋ ಆಗದವರೇ ಗುಂಡು ಹಾರಿಸಿ ಈ ಹತ್ಯೆ ಮಾಡಿದ್ದಾರೆ. ಆದರೆ, ಅವರ ಬಗ್ಗೆ ನಮಗೆ ಗೊತ್ತಿಲ್ಲ. ಹಣಕಾಸಿನ ಅಥವಾ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು" ಎಂದು ಮಿಶ್ರಾ ಅವರ ಸೋದರ ಮಾವ ಅರವಿಂದ್ ತಿವಾರಿ ಮಿಶ್ರಾ ಅನುಮಾನ ವ್ಯಕ್ತಪಡಿಸಿದ್ದಾರೆ.
"ನನ್ನ ಪತಿಯ ವ್ಯವಹಾರದ ಬಗ್ಗೆ ನನಗೆ ಅಷ್ಟು ಮಾಹಿತಿ ಇಲ್ಲ. ನಿತ್ಯ ಬೆಳಗ್ಗೆ 7 ಗಂಟೆಗೆ ಸ್ನಾನ ಮಾಡಿ ಪೂಜೆ ಮಾಡಿ ತಿಂಡಿ ತಿಂದು ಹೋದವರು ಸಂಜೆ ಮನೆಗೆ ಬರುತ್ತಿದ್ದರು. ಇಂದು ಕೂಡ ಹಾಗೆ ಹೊರಗೆ ಹೋಗಿದ್ದರು. ಅವರಿಗೆ ಗಾಯವಾಗಿದೆ ಎಂದು ಮೊದಲು ಯಾರೋ ಹೇಳಿದರು. ಆದರೆ, ನಂತರ ಅವರ ಮೇಲೆ ಗುಂಡು ಹಾರಿಸಲಾಗಿದೆ ಎಂಬ ಸುದ್ದಿ ಬಂದಿತು. ಗುಂಡು ಯಾರು ಹಾರಿಸಿದ್ದು ಅಂತ ನನಗೂ ಗೊತ್ತಿಲ್ಲ" ಎಂದು ಶಂಭುನಾಥ್ ಮಿಶ್ರಾ ಅವರ ಪತ್ನಿ ನೀಲಂ ಮಿಶ್ರಾ ಕೂಡ ಅನುಮಾನ ಹೊರಹಾಕಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಕುಲ್ಟಿ ಪೊಲೀಸ್ ಠಾಣೆಯ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಕೊಲೆಯಾದ ಸ್ಥಳದಿಂದ ಪೊಲೀಸರು ಹಲವಾರು ಬುಲೆಟ್ ಶೆಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಎಲ್ಲಾ ಆಯಾಮಗಳನ್ನು ಪರಿಶೀಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಕುಲ್ಟಿ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದ್ದಾರೆ. ಸದ್ಯ ಗುತ್ತಿಗೆದಾರನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಇದನ್ನೂ ಓದಿ: ಸಹೋದ್ಯೋಗಿಯಿಂದ ಗುಂಡಿನ ದಾಳಿ: ಮೂವರು ಅಧಿಕಾರಿಗಳು ಸೇರಿ ಐವರು ಸೇನಾ ಸಿಬ್ಬಂದಿಗೆ ಗಾಯ