ನವದೆಹಲಿ: ಯುದ್ಧಭೂಮಿ ಉಕ್ರೇನ್‌ನಿಂದ ಸ್ಥಳಾಂತರಿಸಲ್ಪಟ್ಟ ಭಾರತದ ವೈದ್ಯಕೀಯ ವಿದ್ಯಾರ್ಥಿಗಳನ್ನು ಯುದ್ಧ ಸಂತ್ರಸ್ತರೆಂದು ಪರಿಗಣಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ವೈದ್ಯಕೀಯ ವೇದಿಕೆ (National Medical Forum) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಪರಿಣಾಮವಾಗಿ ಸ್ಥಳಾಂತರಗೊಂಡ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಮುಂದಿನ ಭವಿಷ್ಯದಲ್ಲಿ ಅವರ ಉದ್ಯೋಗ ಮತ್ತು ಜೀವನದ ಮೇಲೆಯೂ ಪರಿಣಾಮ ಉಂಟಾಗಲಿದೆ. ಹೀಗಾಗಿ ಸ್ಥಳಾಂತರಗೊಂಡ ವಿದ್ಯಾರ್ಥಿಗಳನ್ನು ಯುದ್ಧ ಸಂತ್ರಸ್ತರೆಂದು ಪರಿಗಣಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಐಎಎನ್‌ಎಸ್‌ನೊಂದಿಗೆ ಮಾತನಾಡಿದ ರಾಷ್ಟ್ರೀಯ ವೈದ್ಯಕೀಯ ವೇದಿಕೆಯ ಅಧ್ಯಕ್ಷ ಡಾ.ಪ್ರೇಮ್ ಅಗರ್‌ವಾಲ್, ಯುದ್ಧ ಪೀಡಿತ ಪ್ರದೇಶದಿಂದ ವಿದ್ಯಾರ್ಥಿಗಳನ್ನು ಕರೆತರುವುದರಿಂದ ಅವರಿಗೆ ಸಹಾಯವಾಗುವುದಿಲ್ಲ. ಅವರು ಯುದ್ಧ ಸಂತ್ರಸ್ತರು. ಅವರು ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಲು ಸಹಕಾರ ನೀಡಬೇಕು. ವಿದ್ಯಾರ್ಥಿಗಳನ್ನು ಯುದ್ಧ ಸಂತ್ರಸ್ತರೆಂದು ಘೋಷಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯನ್ನೂ ಸಲ್ಲಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಿ, ನ್ಯಾಯ ಒದಗಿಸುವ ಸಮಯ ಬಂದಿದೆ: ಝೆಲೆನ್ಸ್ಕಿ
ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ, ಉಕ್ರೇನ್‌ನ ಬಹುತೇಕ ಎಲ್ಲಾ ನಗರಗಳಲ್ಲಿ ಭಾರಿ ವಿನಾಶ ಮತ್ತು ಜೀವಹಾನಿ ಸಂಭವಿಸಿದೆ. ಈ ವಿದ್ಯಾರ್ಥಿಗಳು ಯುದ್ಧದಲ್ಲಿ ಭಾಗಿಯಾಗಿಲ್ಲ. ಆದರೆ ಯುದ್ಧದ ದುಷ್ಪರಿಣಾಮವನ್ನು ಎದುರಿಸಬೇಕಾಯಿತು ಎಂದು ಪತ್ರದಲ್ಲಿ ಹೇಳಲಾಗಿದೆ.